ಸಿನಿ ಸಮಾಚಾರ

ಸಿನಿಮಾ ಉದ್ಯಮ ಸವಾಲುಗಳ ಬಗ್ಗೆ ಪ್ರಧಾನಿ ಮೋದಿ ಜತೆ ಚರ್ಚಿಸಿದ ಕರಣ್​ ಜೋಹರ್

ಮುಂಬೈ: ಬಾಲಿವುಡ್​ ನಟರಾದ ಅಕ್ಷಯ್ ಕುಮಾರ್​, ಅಜಯ್​ ದೇವಗನ್ ಮತ್ತು ನಿರ್ದೇಶಕ ಕರಣ್​ ಜೋಹರ್​ ಅವರನ್ನೊಳಗೊಂಡ ನಿಯೋಗ ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಚಲನಚಿತ್ರೋದ್ಯಮ ಉತ್ತೇಜನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಿತು.

ಭಾರತೀಯ ಚಲನಚಿತ್ರೋದ್ಯಮದ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಸಲುವಾಗಿ ಮೋದಿ ಮಹಾರಾಷ್ಟ್ರದ ರಾಜಭವನಕ್ಕೆ ಒಂದು ದಿನದ ಭೇಟಿ ಹಮ್ಮಿಕೊಂಡಿದ್ದರು. ಅಲ್ಲಿಗೆ ತೆರಳಿದ ನಟ ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ಕರಣ್​ ಜೋಹಾರ್​, ಬಾಲಿವುಡ್​ ನಿರ್ಮಾಪಕರಾದ ರಿತೇಶ್​ ಸಿಧ್ವಾನಿ, ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಸಿದ್ದಾರ್ಥ ರಾಯ್​ ಕಪೂರ್​, ರಾಕೇಶ್​ ರೋಶನ್​, ರೂನಿ ಸ್ಕ್ರೂವಾಲಾ, ವಿಜಯ್​ ಸಿಂಗ್​, ಕೇಂದ್ರ ಚಲನಚಿತ್ರ ಸೆನ್ಸಾರ್​ ಮಂಡಳಿ ( Central Board of Film Certification ) ಚೇರ್ಮನ್ ಪ್ರಸೂನ್​ ಜೋಶಿ ಮತ್ತಿತರರು ಮೋದಿಯವರೊಂದಿಗೆ ಮಾತುಕತೆ ನಡೆಸಿ, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ವ್ಯಾಪಕ ಬೆಳವಣಿಗೆ, ಸಾಮರ್ಥ್ಯದ ಸಣ್ಣ ಅವಲೋಕನವನ್ನು ಪ್ರಧಾನಿಯವರಿಗೆ ನೀಡಿದರು.

ಸಿನಿಮಾ ಹಾಗೂ ಮನರಂಜನಾ ಕ್ಷೇತ್ರಕ್ಕೆ ಕಡಿಮೆ ಮತ್ತು ಏಕರೂಪ ಜಿಎಸ್​ಟಿ ಅನ್ವಯ ಮಾಡುವಂತೆ ಕೂಡ ಪ್ರಧಾನಿಯವರ ಬಳಿ ನಿಯೋಗ ಮನವಿ ಮಾಡಿದೆ ಎಂದು ಪ್ರೆಸ್​ ಮಾಹಿತಿ ಬ್ಯೂರೋ ಹೇಳಿಕೆ ಬಿಡುಗಡೆ ಮಾಡಿದೆ.

ನಂತರ ಮಾತನಾಡಿದ ಪ್ರಧಾನಿ, ಭಾರತದ ಮನರಂಜನಾ ಉದ್ಯಮ ಜಗತ್ತಿನಾದ್ಯಂತ ಅಪಾರವಾದ ಜನಪ್ರಿಯತೆ ಹೊಂದಿದೆ. ವಿಶ್ವವನ್ನು ಭಾರತದತ್ತ ಆಕರ್ಷಿಸುವ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು. ಹಾಗೇ ಕೇಂದ್ರ ಸರ್ಕಾರ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಹಾಗೂ ನಿಯೋಗದ ಸಲಹೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.

ಚಿತ್ರೋದ್ಯಮದ ನಿಯೋಗದೊಂದಿಗೆ ಚರ್ಚೆಯ ನಂತರ ಟ್ವೀಟ್​ ಮಾಡಿದ ಮೋದಿ, ಭಾರತೀಯ ಚಿತ್ರೋದ್ಯಮದ ನಿಯೋಗದೊಂದಿಗೆ ವಿಸ್ತಾರವಾಗಿ, ಧನಾತ್ಮಕವಾಗಿ ಮಾತುಕತೆ ನಡೆಸಲಾಗಿದೆ. ಮನರಂಜನೆ ಹಾಗೂ ಸಿನಿಮಾ ಕ್ಷೇತ್ರದ ಬಗ್ಗೆ ಅವರು ನಡೆಸಿದ ಅಧ್ಯಯನದ ಸಂಪೂರ್ಣ ವಿವರವನ್ನೂ ನೀಡಿದ್ದಾರೆ. ಅಲ್ಲದೆ ಜಿಎಸ್​ಟಿ ಅನ್ವಯ ಕುರಿತಂತೆ ಅಮೂಲ್ಯ ಸಲಹೆಗಳನ್ನೂ ನೀಡಿದ್ದಾರೆಂದು ಹೇಳಿದ್ದಾರೆ.

ನಟ ಅಕ್ಷಯ್​ ಕುಮಾರ್ ಕೂಡ ಮೋದಿಯವರ ಭೇಟಿಯ ಬಗ್ಗೆ ಟ್ವೀಟ್​ ಮಾಡಿದ್ದಾರೆ, ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ನಮ್ಮ ಸಲಹೆ, ಮನವಿಗಳನ್ನು ಆಲಿಸಿ, ಸುಧೀರ್ಘ ಸಮಯದವರೆಗೆ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ದೇಶದ ಮನರಂಜನಾ ರಾಜಧಾನಿಯಾಗಿರುವ ಮುಂಬೈನ ಅಭಿವೃದ್ಧಿ ಬಗ್ಗೆಯೂ ನಿಯೋಗ ಪ್ರಸ್ತಾಪ ಇಟ್ಟಿದೆ ಎನ್ನಲಾಗಿದೆ.

 

About the author

ಕನ್ನಡ ಟುಡೆ

Leave a Comment