ರಾಷ್ಟ್ರ

ಸಿಬಿಎಸ್‏ಇ ಪ್ರಶ್ನೆಪತ್ರಿಕೆ ಸೋರಿಕೆ: ಜಾರ್ಖಂಡ್ ನಲ್ಲಿ 6 ವಿದ್ಯಾರ್ಥಿಗಳ ಬಂಧನ; ಗೂಗಲ್ ನೆರವು ಕೇಳಿದ ಪೊಲೀಸ್

ರಾಂಚಿ: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ -ಸಿಬಿಎಸ್  ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆರು ಮಂದಿ ವಿದ್ಯಾರ್ಥಿಗಳನ್ನು ಜಾರ್ಖಂಡ್ ಪೊಲೀಸರು ಇಂದು ಬಂಧಿಸಿದ್ದಾರೆ.

ಛಾತ್ರಾ ಸಾದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖಾಸಗಿ ಕೋಚಿಂಗ್ ಸೆಂಟರ್  ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ 30 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ 12ಕ್ಕೂ ಹೆಚ್ಚು ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.12 ನೇ ತರಗತಿಯ ಅರ್ಥಶಾಸ್ತ್ರ ಹಾಗೂ 10 ನೇ ತರಗತಿಯ ಗಣಿತಶಾಸ್ತ್ರದ ವಿಷಯದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎಸ್ಇ ಈ ಪ್ರಾಧ್ಯಾಪಕರ ವಿರುದ್ಧ ಆರೋಪ ಮಾಡಿತ್ತು.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ 10 ವಾಟ್ಸಾಪ್ ಗುಂಪುಗಳನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಒಂದೊಂದು ಗುಂಪಿನಲ್ಲಿಯೂ 50ರಿಂದ 60 ಮಂದಿ ಸದಸ್ಯರಿದ್ದಾರೆ.ವಿಚಾರಣೆ ಪ್ರಗತಿಯಲ್ಲಿದೆ.  ಈ ಮಧ್ಯೆ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ವಿದ್ಯಾರ್ಥಿಗಳು ದೇಶದ ವಿವಿಧ ನಗರಗಳಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ , ಲೂಧಿಯಾನ, ಕಾನ್ಪುರದಲ್ಲಿ ಪ್ರತಿಭಟನೆ ಮುಂದುವರೆದಿದೆ.

ಸಿಬಿಎಸ್ ಇ ಮುಖ್ಯಸ್ಥರಿಗೆ ಕಳುಹಿಸಿರುವ ಈ ಮೇಲ್ ಸಂಬಂಧ ಗೂಗಲ್ ಸಂಸ್ಥೆಯಿಂದ ಅಪರಾಧ ವಿಭಾಗದ ಪೊಲೀಸರು ನೆರವು ಕೇಳಿದ್ದಾರೆ. ಕೈಬರಹದ ಪ್ರಶ್ನೆ ಪತ್ರಿಕೆಯ ಚಿತ್ರದೊಂದಿಗೆ ಜಿ- ಮೇಲ್ ಐಡಿಯಿಂದ ಸಿಬಿಎಸ್ ಇ ಮುಖ್ಯಸ್ಥರಿಗೆ ಮೇಲ್ ವೊಂದನ್ನು ಕಳುಹಿಸಲಾಗಿದೆ.

About the author

ಕನ್ನಡ ಟುಡೆ

Leave a Comment