ರಾಷ್ಟ್ರ ಸುದ್ದಿ

ಮಮತಾ ವರ್ಸಸ್ ಸಿಬಿಐ: ಸಿಬಿಐ ವಿಚಾರಣೆಗೆ ಹಾಜರಾಗಿ; ಕೋಲ್ಕತಾ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಕೋರ್ಟ್ ಆದೇಶ

ಹೊಸದಿಲ್ಲಿ: ಶಾರದಾ ಚಿಟ್‌ಫಂಡ್ ಹಗರಣದ ತನಿಖೆಗೆ ಸಿಬಿಐ ಮುಂದೆ ಹಾಜರಾಗಿ ಪೂರ್ಣ ಸಹಕಾರ ನೀಡುವಂತೆ ಕೋಲ್ಕತಾ ಪೊಲೀಸ್ ಹೈಕಮಿಷನರ್‌ಗೆ ಸುಪ್ರೀಂ ಕೋರ್ಟ್  ಆದೇಶ ನೀಡಿದೆ. ಆದರೆ ಕುಮಾರ್ ಅವರನ್ನು ಬಂಧಿಸದಂತೆ ಸಿಬಿಐಗೂ ಸೂಚನೆ ನೀಡಿದೆ.

ಇದೇ ವೇಳೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಕಮಿಷನರ್ ಕುಮಾರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಫೆಬ್ರವರಿ 20ರೊಳಗೆ ಉತ್ತರಿಸುವಂತೆಯೂ ನಿರ್ದೇಶನ ನೀಡಿದೆ. ಇದರೊಂದಿಗೆ ಶಾರದಾ ಚಿಟ್‌ಫಂಡ್ ಹಗರಣದ ತನಿಖೆ ವಿಚಾರದಲ್ಲಿ ಸಿಬಿಐ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ನಡುವಣ ಸಮರ ಮಹತ್ವದ ಘಟ್ಟ ತಲುಪಿದೆ.

ಬಿಜೆಪಿ ಸ್ವಾಗತ: ಪಶ್ಚಿಮ ಬಂಗಾಳದಿಂದ ಹೊರಗೆ, ಇನ್ನೊಂದು ರಾಜ್ಯದ ರಾಜಧಾನಿಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೋಲ್ಕತಾ ಪೊಲೀಸ್ ಹೈಕಮಿಷನರ್‌ ರಾಜೀವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವುದು ನ್ಯಾಯಕ್ಕೆ ಸಂದ ಬಹುದೊಡ್ಡ ಜಯ ಎಂದು ಬಿಜೆಪಿ ಬಣ್ಣಿಸಿದೆ. ತನಿಖೆಗೆ ಪೂರ್ಣ ಸಹಕಾರ ನೀಡುವಂತೆ ಪೊಲೀಸ್ ಮಹಾ ನಿರ್ದೇಶಕರಿಗೂ ಆದೇಶಿಸುತ್ತೇವೆ. ನ್ಯಾಯಾಂಗ ನಿಂದನೆ ಪ್ರಕರಣವನ್ನು ನಂತರ ಕೈಗೆತ್ತಿಕೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್ ಹೇಳಿದರು.

ಕೋಲ್ಕತಾ ಪೊಲೀಸ್ ಕಮಿಷನರ್‌ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲೇಬೇಕು. ಆದರೆ ಸಿಬಿಐ ಅವರನ್ನು ಬಂಧಿಸುವಂತಿಲ್ಲ ಎಂದು ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಶಿಲ್ಲಾಂಗ್‌ನ ತಟಸ್ಥ ಸ್ಥಳದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ರಾಜೀವ್ ಕುಮಾರ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಫೆಬ್ರವರಿ 20ರಂದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ಜಾರಿ ಮಾಡಿದೆ.

ಮಮತಾ ಸ್ವಾಗತ, ಧರಣಿ ವಾಪಸ್: ಸುಪ್ರೀಂ ಕೋರ್ಟ್‌ ಆದೇಶವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದು, ಧರಣಿ ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ. ಸಿಬಿಐ ವಿಚಾರಣೆ ನಡೆಸಬಹುದೇ ಹೊರತು ಪೊಲೀಸ್ ಅಧಿಕಾರಿಗಳನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ದೀದಿ ಹೇಳಿಕೊಂಡಿದ್ದಾರೆ. ನ್ಯಾಯಾಂಗಕ್ಕೆ ನಾವು ಋಣಿಯಾಗಿದ್ದೇವೆ. ಇದರಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಬಲಪಡಿಸಿದಂತಾಗಿದೆ’ ಎಂದು ಮಮತಾ ಹೇಳಿದ್ದಾರೆ. ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟುಮಾಡಿದೆ. ಅಧಿಕಾರಿಗಳನ್ನು ಬೆದರಿಸಿ ಬಂಧಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ನಮಗೆ ಸಂದ ನೈತಿಕ ಜಯ ಎಂದು ಮಮತಾ ಪುನರುಚ್ಚರಿಸಿದರು.

About the author

ಕನ್ನಡ ಟುಡೆ

Leave a Comment