ರಾಷ್ಟ್ರ ಸುದ್ದಿ

ಸಿಬಿಐ ಸಂಘರ್ಷ: ತೀವ್ರಗೊಂಡ ವಿಪಕ್ಷಗಳ ಪ್ರತಿಭಟನೆ, ರಾಹುಲ್ ಗಾಂಧಿ ಮತ್ತಿತರರು ಪೊಲೀಸರ ವಶಕ್ಕೆ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇತರೆ ವಿರೋಧ ಪಕ್ಷಗಳ ನಾಯಕರ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ರಾಹುಲ್ ಸೇರಿ ಇತರೆ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ರಾಜಧಾನಿ ದೆಹಲಿಯಲ್ಲಿರುವ ಸಿಬಿಐ ಮುಖ್ಯ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಕಾಲ ಕಳೆಯುತ್ತಿದ್ದಂತೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಲೋಧಿ ರಸ್ತೆಯಲ್ಲಿರುವ ದಯಾಳ್ ಸಿಂಗ್ ಕಾಲೇಜಿನಿಂದ ಸಿಬಿಐ ಮುಖ್ಯ ಕಚೇರಿವರೆಗೂ 4.2 ಕಿಮೀ ದೂರ ನಡೆದ ಪ್ರತಿಭಟನಾ ರ್ಯಾಲಿ ನಡೆದಿದ್ದು, ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್, ಅಹ್ಮದ್ ಪಟೇಲ್, ಮೋತಿಲಾಲ್ ವೋರಾ, ವೀರಪ್ಪ ಮೊಯ್ಲಿ, ಆನಂದ್ ಶರ್ಮಾ ಸೇರಿದಂತೆ ಟಿಎಂಸಿ ಹಾಗೂ ಸಿಪಿಐ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ. ಪ್ರತಿಭಟನೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿದೆ. ಪ್ರತಿಭಟನೆ ವೇಳೆ ಮಾತಾಡಿರುವ ಗೆಹ್ಲೋಟ್ ಅವರು, ಕಡ್ಡಾಯ ರಜೆ ಮೇಲೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಳುಹಿಸಿರುವುದು ಅಕ್ರಮ ಎಂದು ಹೇಳಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿಯವರೊಂದಿಗೆ ಲೋಕತಾಂತ್ರಿಕ್ ಜನತಾ ದಳ ನಾಯಕ ಶರದ್ ಯಾದವ್, ಸಿಬಿಐ ನಾಯಕ ಡಿ.ರಾಜಾ ಹಾಗೂ ಟಿಎಂಸಿ ನಾಯಕ ನಾದಿಮುಲ್ ಹಕ್ ಅವರು ಕೈಜೋಡಿಸಿದ್ದು, ಪ್ರತಿಭಟನೆ ವೇಳೆ ಕಾಂಗ್ರೆಸ್ ರಾಹುಲ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಸಿಬಿಐ ಕಚೇರಿ ಮುಂದೆ ಭದ್ರತೆಯನ್ನು ಹೆಚ್ಚಿಸಿ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment