ರಾಷ್ಟ್ರ ಸುದ್ದಿ

ಸಿ.ಪಿ.ಜೋಷಿ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್​ ತತ್ತ್ವಗಳಿಗೆ ವಿರೋಧ: ರಾಹುಲ್​ ಗಾಂಧಿ

ನವದೆಹಲಿ: ಬ್ರಾಹ್ಮಣರು ಮಾತ್ರ ಹಿಂದುತ್ವದ ಬಗ್ಗೆ ಮಾತನಾಡಬಹುದು, ಮೋದಿ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಡಾ. ಸಿ.ಪಿ.ಜೋಷಿ ಅವರು ಕ್ಷಮೆಯಾಚಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ತಿಳಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ಕುರಿತು ಟ್ವೀಟ್​ ಮಾಡಿರುವ ರಾಹುಲ್​, ಸಿ.ಪಿ. ಜೋಷಿ ಅವರು ನೀಡಿರುವ ಹೇಳಿಕೆ ನಮ್ಮ ಪಕ್ಷದ ತತ್ತ್ವಗಳಿಗೆ ವಿರುದ್ಧವಾಗಿದೆ. ಯಾವ ಪಕ್ಷದ ನಾಯಕರಾದರೂ ಕೂಡ ಸಮಾಜದ ಯಾವುದೇ ಸಮುದಾಯದವರನ್ನು ನೋಯಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಶುಕ್ರವಾರ ಟ್ವೀಟ್​ ಮಾಡಿದ್ದಾರೆ.

ಸಿ.ಪಿ. ಜೋಷಿ ಅವರು ಈ ಕುರಿತು ಕ್ಷಮೆ ಕೇಳಬೇಕು ಎಂದಿರುವ ರಾಹುಲ್​, ಕಾಂಗ್ರೆಸ್​ನ ನಂಬಿಕೆ ಮತ್ತು ಕಾರ್ಯಕರ್ತರ ದೃಷ್ಟಿಯಿಂದ ಈಗಾಗಲೇ ಸಿ.ಪಿ. ಜೋಷಿಯವರು ಅವರ ತಪ್ಪನ್ನು ಅರಿತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಹುಲ್​ ಹೇಳಿರುವ ದಾಟಿಯಲ್ಲೇ ಕ್ಷಮೆ ಯಾಚಿಸಿರುವ ಜೋಷಿ, ಕಾಂಗ್ರೆಸ್​ ನಂಬಿಕೆ ಮತ್ತು ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ, ಸಮಾಜದ ಯಾವುದಾದರೂ ವರ್ಗಕ್ಕೆ ನನ್ನ ಹೇಳಿಕೆ ಬೇಸರ ತಂದಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಮುಂದಿನ ತಿಂಗಳು ರಾಜಸ್ಥಾನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್​ ಹಿರಿಯ ನಾಯಕ ಸಿ.ಪಿ. ಜೋಷಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು.

About the author

ಕನ್ನಡ ಟುಡೆ

Leave a Comment