ರಾಜಕೀಯ

ಸುಮಲತಾಗೆ ಕೈ ಕೊಟ್ಟ ಕಾಂಗ್ರೆಸ್, ಮಂಡ್ಯದಲ್ಲಿ ನಿಖಿಲ್ ಅಖಾಡಕ್ಕೆ

ಹುಬ್ಬಳ್ಳಿ;ಮುಂಬರುವ ಲೋಕಸಭಾ ಚುನಾವಣೆಗೆ ಅಖಾಡಕ್ಕೆ ವೇದಿಕೆ ಸಜ್ಜಾಗುತ್ತಿರುವ ನಡುವೆಯೇ ಮೈತ್ರಿ ಸರ್ಕಾರದಲ್ಲಿ ತೀವ್ರ ಇಕ್ಕಟ್ಟಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ನಿರ್ಧಾರವಾಗಿದೆ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತಂತೆ ಮಂಗಳವಾರ ಸುದ್ದಿಗಾರರು ಪ್ರಶ್ನಿಸಿದಾಗ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ನ ಹಾಲಿ ಸಂಸದರು ಇರುವುದರಿಂದ ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ, ಸುಮಲತಾ ಅವರು ಪಕ್ಷೇತರರಾಗಿ ಅಖಾಡಕ್ಕಿಳಿಯುವುದು ಖಚಿತವಾದಂತಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಪ್ಪಂದಕ್ಕೆ ಬಂದಿದ್ದು, ದೇವೇಗೌಡರ ಮೊಮ್ಮಗ, ಹಾಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಮಾರ್ಚ್ 7ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

 

About the author

ಕನ್ನಡ ಟುಡೆ

Leave a Comment