ರಾಜ್ಯ ಸುದ್ದಿ

ಸುವರ್ಣಸೌಧ: ಸಾಲ ಮನ್ನಾ ಚರ್ಚೆಗೆ ಕಲಾಪ ಬಲಿ

ಸುವರ್ಣಸೌಧ: ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಹಾಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ವಿಧಾನಮಂಡಲ ಉಭಯ ಸದನಗಳ ಇಡೀ ದಿನದ ಕಲಾಪ ಬಲಿಯಾಯಿತು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾದ ಖಚಿತ ದಿನಾಂಕ ತಿಳಿಸಬೇಕು. ಸಿಎಂ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ಕ್ಷಮೆ ಯಾಚಿಸಬೇಕು ಎಂದು ವಿಧಾನಸಭೆಯಲ್ಲಿ ಬುಧವಾರ ಆರಂಭಿಸಿದ್ದ ಧರಣಿ, ಪ್ರತಿಭಟನೆ ಗುರುವಾರವೂ ಮುಂದುವರಿಯಿತು. ಇದರಿಂದ ಎರಡು ಬಾರಿ ಸದನ ಮುಂದೂಡಿದರೂ ಪರಿಸ್ಥಿತಿ ತಿಳಿಯಾಗದ ಕಾರಣ ಶುಕ್ರವಾರಕ್ಕೆ ಮುಂದೂಡಲಾಯಿತು. ವಿಧಾನಪರಿಷತ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರಿಂದ ಅಲ್ಲಿಯೂ ನಾಲ್ಕು ಬಾರಿ ಮುಂದೂಡಿ, ನಂತರ ಶುಕ್ರವಾರಕ್ಕೆ ಸದನ ಮುಂದೂಡುವಂತಾಯಿತು.

ವಿಧಾನಸಭೆಯಲ್ಲಿ ಕ್ಷಮೆಗೆ ಪಟ್ಟು: ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾದ ಖಚಿತ ದಿನಾಂಕ ತಿಳಿಸಬೇಕು. ಯಡಿಯೂರಪ್ಪಯವರ ಕ್ಷಮೆಯಾಚಿಸಬೇಕು ಎಂದು ಘೋಷಣೆ ಕೂಗಿದರು. ಹಿರಿಯ ಸದಸ್ಯ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬರದ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರ ಉತ್ತರ ಪೂರ್ಣಗೊಂಡಿಲ್ಲ. ನಾವು ಇನ್ನೂ ಕೆಲವು ಸ್ಪಷ್ಟನೆ ಬಯಸಿದ್ದೆವು. ಬುಧವಾರ ಅವರು ಉತ್ತರಿಸದೇ ಹೋದರು. ಈಗ ಕಲಾಪ ಪಟ್ಟಿಯಲ್ಲೂ ಮುಖ್ಯಮಂತ್ರಿಯವರ ಉತ್ತರದ ಪ್ರಸ್ತಾಪ ಇಲ್ಲ. ಬೇರೆ ವಿಷಯಗಳು ಇವೆ. ಮುಖ್ಯಮಂತ್ರಿಯವರು ಉತ್ತರ ನೀಡುವಾಗ ನಮ್ಮ ನಾಯಕರಿಗೆ ಅಪಮಾನ ಮಾಡಿದರು. ಅದನ್ನು ನೀವು ಸಹಿಸುತೀ¤ರಾ? ಸಾಲಮನ್ನಾ ಕುರಿತು ಸ್ಪಷ್ಟ ಉತ್ತರ ನೀಡದಿದ್ದರೆ ಹೇಗೆ? ಉತ್ತರ ಕರ್ನಾಟಕ ಭಾಗದ ನಮ್ಮ ಸದಸ್ಯರು ಸಾಕಷ್ಟು ಭರವಸೆ ಇಟ್ಟುಕೊಂಡು ಬಂದಿದ್ದಾರೆ. ಸರ್ಕಾರ ಉತ್ತರ ನೀಡದೆ ನುಣುಚಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ಉತ್ತರ ಕೊಡಲು ಸಮಯ, ರಾಹುಕಾಲ ನೋಡಿ ನಿಗದಿ ಮಾಡುವುದು ಯಾವ ಪರಿ. ನಾವು ಎಲ್ಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮಾತನಾಡಿ, ಪ್ರತಿಪಕ್ಷ ನಾಯಕರಿಗೆ ಸಿಎಂ ಅಪಮಾನ ಮಾಡಿದ್ದಾರೆ. ಬರ ನಿರ್ವಹಣೆ ಕುರಿತು ನಾಲ್ವರು ಸಚಿವರು ಉತ್ತರ ಕೊಟ್ಟಿದ್ದು  ನಾನು ಹಿಂದೆಂದೂ ನೋಡಿಲ್ಲ. ಸಿಎಂ ಇಡೀ ದಿನ ಉತ್ತರ ಕೊಟ್ಟರೂ ಯಾವುದೇ ತೃಪ್ತಿಕರವಾಗಿಲ್ಲ. ಸಾಲಮನ್ನಾ ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾಗೆ 6,500 ಕೋಟಿ ರೂ. ಇಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಇದುವರೆಗೂ ಆಗಿರುವ ಮನ್ನಾ ಕೇವಲ 50 ಕೋಟಿ ರೂ. ಇನ್ನು ಸಹಕಾರ ಸಂಘಗಳ ಸಾಲಮನ್ನಾ ಏನಾಗಿದೆ ನಾನು ಹೇಳಬೇಕಿಲ್ಲ. ಹೀಗಾಗಿ, ನಮಗೆ ಸ್ಪಷ್ಟ ಉತ್ತರ ಬೇಕು. ಸಿಎಂ ಸದನಕ್ಕೆ ಬಂದು ಉತ್ತರಿಸಲಿ ಎಂದು ಒತ್ತಾಯಿಸಿದರು. ವಿರೋಧ ಪಕ್ಷದ ನಾಯಕರಿಗೆ ಅಪಮಾನ ಮಾಡುವುದು ಶೋಭೆ ತರುವ ವಿಚಾರವಲ್ಲ ಎಂದರು.

ಅದಕ್ಕೆ ಸ್ಪೀಕರ್‌ ರಮೇಶ್‌ ಕುಮಾರ್‌, ಬುಧವಾರ ಸದನದಲ್ಲಿ ನೀವು (ಯಡಿಯೂರಪ್ಪ) ಹಾಗೂ ಮುಖ್ಯಮಂತ್ರಿಯವರು ಪರಸ್ಪರ ಮಾತನಾಡಿದಿರಿ. ಅದರಲ್ಲಿ ಅಸಂಸದೀಯ ಪದ ಇದ್ದರೆ ಕಡತದಿಂದ ತೆಗೆದುಹಾಕಲು ತಿಳಿಸುತ್ತೇನೆ. ಆದರೆ, ನೀವು ಹೀಗೆ ಮಾತನಾಡಬೇಕು ಎಂದು ನಾನು ಹೇಳಲು ಆಗುವುದಿಲ್ಲ. ಅವರ ಮಾತಿಗೆ ನೀವು ತಾಳ್ಮೆಯಿಂದ ಕಾದು ಸ್ಪಷ್ಟನೆ ಕೇಳುವ ಸಂದರ್ಭದಲ್ಲಿ ಪ್ರತಿಯಾಗಿ ಉತ್ತರ ಕೊಡಬಹುದಿತ್ತು. ಅದು ಬಿಟ್ಟು ನಿಮ್ಮ ಸದಸ್ಯರನ್ನು ಬಾವಿಗೆ ಇಳಿಸಿ ಪ್ರತಿಭಟನೆ ಮಾಡಿಸಿ ನೀವು ಮಾತನಾಡುವುದು ಶೋಭೆಯೇ ಎಂದು ಪ್ರಶ್ನಿಸಿದರು. ಸದನ ನಡೆಸಲು ಅವಕಾಶ ಕಲ್ಪಿಸಿ ಪ್ರತಿಭಟನೆ ವಾಪಸ್‌ ಪಡೆಯಿರಿ ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿ ಘೋಷಣೆ ಕೂಗಿದರು. ಸಿಎಂ ಸದನಕ್ಕೆ ಬಂದು ಉತ್ತರಿಸಲಿ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ಬಿಜೆಪಿಯವರು ಮೋದಿ ಅವರನ್ನು ಹೋಗಿ ಕೇಳಲಿ. ನೀವು ಬೇಡ ಎಂದರೂ ನಾವು ಸಾಲಮನ್ನಾ ಮಾಡಿಯೇ ತೀರುತ್ತೇವೆ ಎಂದು ತಿರುಗೇಟು ನೀಡಿದರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಸುವರ್ಣಸೌಧದಲ್ಲಿ ಸುಸೂತ್ರವಾಗಿ ಕಲಾಪ ನಡೆಸಿದ ಕ್ರೆಡಿಟ್‌ ಸಮ್ಮಿಶ್ರ ಸರ್ಕಾರಕ್ಕೆ ಬರುತ್ತದೆ ಎಂಬ ಆತಂಕದಿಂದ ಬಿಜೆಪಿಯವರು ಬೇಕಂತಲೇ ಪ್ರತಿಭಟನೆ ಮಾಡಿ ಸದನ ಮುಂದೂಡುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌, ಸಾಲಮನ್ನಾ ಬಗ್ಗೆ ಮಾತನಾಡುತ್ತೇನೆ ಎಂದರೂ ಇದಕ್ಕೆ ಅವಕಾಶ ಸಿಗಲಿಲ್ಲ. ಘೋಷಣೆ, ಗದ್ದಲ ಹೆಚ್ಚಾದಾಗ ಸದನವನ್ನು ಅರ್ಧ ಗಂಟೆ ಮುಂದೂಡಲಾಯಿತು. ನಂತರ ಮಧ್ಯಾಹ್ನ 1 ಗಂಟೆಗೆ ಸದನ ಆರಂಭವಾದಾಗಲೂ ಪ್ರತಿಭಟನೆ ಮುಂದುವರಿದಿದ್ದರೆ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. 3 ಗಂಟೆಗೆ ಸಮಾವೇಶಗೊಂಡಾಗಲೂ ಪ್ರತಿಭಟನೆ ಮುಂದುವರಿದಾಗ ಶುಕ್ರವಾರಕ್ಕೆ ಮುಂದೂಡಲಾಯಿತು.

ವಿಧಾನಪರಿಷತ್‌: ಪರಿಷತ್‌ನಲ್ಲೂ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ವೇಳೆ ಮುಂದೂಡಿ ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಧರಣಿ ನಡೆಸಿದರು. ನಿಯಮದಂತೆ  ಪ್ರಶ್ನೋತ್ತರ ಕಲಾಪ ಮುಗಿಸಿ ನಂತರ ಚರ್ಚೆಗೆ ಅವಕಾಶ ಕೊಡಿ ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಆದರೆ, ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಸದನ ಮುಂದೂಡಲಾಯಿತು. ಇದೇ ರೀತಿ ನಾಲ್ಕು ಬಾರಿ ಮುಂದೂಡಿದ ನಂತರವೂ ಬಿಜೆಪಿ ಧರಣಿ ವಾಪಸ್‌ ಪಡೆಯದ ಕಾರಣ ಶುಕ್ರವಾರಕ್ಕೆ ಸದನ ಮುಂದೂಡಲಾಯಿತು.

ಆಹಾರ ಧಾನ್ಯ, ತರಕಾರಿ ಖರೀದಿ, ಮಾರಾಟಕ್ಕೆ ಹೊಸ ಯೋಜನೆ
ರಾಜ್ಯದ ರೈತರು ಬೆಳೆಯುವ ಆಹಾರ ಧಾನ್ಯ ಹಾಗೂ ತರಕಾರಿಯನ್ನು ಸರ್ಕಾರವೇ ಖರೀದಿಸಿ ಶೇ.5 ರಷ್ಟು ಲಾಭಾಂಶ ಇಟ್ಟುಕೊಂಡು ನೇರವಾಗಿ ಗ್ರಾಹಕರಿಗೆ ಪೂರೈಕೆ ಮಾಡುವ ನೂತನ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ನೂತನ ಯೋಜನೆ ಘೋಷಣೆಯಾಗಲಿದೆ ಎಂದರು. ಸಮ್ಮಿಶ್ರ ಸರ್ಕಾರ ಕೈಗೊಂಡಿರುವ ಸಾಲಮನ್ನಾ ತೀರ್ಮಾನ ಅಂತಿಮವಾಗಬೇಕು. ಮುಂದಿನ ದಿನಗಳಲ್ಲಿ ರೈತರು ಸಾಲಮನ್ನಾಗೆ ಒತ್ತಾಯಿಸಬಾರದು. ಅಂತಹ ಪರಿಸ್ಥಿತಿ ಸಹ ಇರಬಾರದು. ಹೀಗಾಗಿ, ಹಲವಾರು ಯೋಜನೆಗಳನ್ನು ರೂಪಿಸಲು ತೀರ್ಮಾನಿಸಿದ್ದೇನೆ. ಅದನ್ನು ನೀವು ಆಶಾಗೋಪುರ ಎಂದರೂ ಪರವಾಗಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ 28 ಸಾವಿರ ಕೋಟಿ ರೂ. ಮೊತ್ತದ ಆಹಾರ ಧಾನ್ಯ ಹಾಗೂ ತರಕಾರಿ ಬೆಳೆಯಲಾಗುತ್ತಿದ್ದು ಅದು ಗ್ರಾಹಕನಿಗೆ ಹೋಗುವಾಗ 54 ಸಾವಿರ  ಕೋಟಿ ರೂ. ಆಗುತ್ತದೆ. ನಡುವಿನ ಮೊತ್ತ ಮಧ್ಯವರ್ತಿಗಳ ಕೈ ಸೇರುತ್ತಿದೆ. ಇದನ್ನು ತಪ್ಪಿಸಿ ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಸರ್ಕಾರವೇ ಆಹಾರ ಧಾನ್ಯ ಹಾಗೂ ತರಕಾರಿ ಖರೀದಿಸಿ ಶೇ.5 ರಷ್ಟು ಲಾಭಾಂಶ ಮಾತ್ರ ಇಟ್ಟುಕೊಂಡು ಗ್ರಾಹಕರಿಗೂ ಕೈ ಗೆಟಕುವ ದರದಲ್ಲಿ  ಮಾರಾಟ ಮಾಡಲಿದೆ ಎಂದು ತಿಳಿಸಿದರು. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ  ಕಲ್ಪಿಸಲಾಗುವುದು. ಇದೊಂದು ಮಹತ್ವಾಕಾಂಕ್ಷಿ ಹಾಗೂ ಬೃಹತ್‌ ಯೋಜನೆಯಾಗಿರಲಿದೆ ಎಂದು ಹೇಳಿದರು.

 

About the author

ಕನ್ನಡ ಟುಡೆ

Leave a Comment