ರಾಜ್ಯ ಸುದ್ದಿ

ಸೇನೆ ಕಾರ್ಯಾಚರಣೆ ಬಗ್ಗೆ ಸಾಕ್ಷಿ ಕೇಳುವವರ ದೇಶದ್ರೋಹಿ ಮನಸ್ಥಿತಿ ಜಗಜ್ಜಾಹೀರು: ಶೋಭಾ ಕರಂದ್ಲಾಜೆ

ಮಂಗಳೂರು: ಉಗ್ರರ ನಿಗ್ರಹಕ್ಕಾಗಿ ಬಾಲಾಕೋಟ್‌ ಕಾರ್ಯಾಚರಣೆ ಬಗ್ಗೆ ದೇಶವೇ ಹೆಮ್ಮೆಯಲ್ಲಿ ಬೀಗುತ್ತಿದೆ. ಆದರೆ ನಮ್ಮಲ್ಲಿರುವ ಪ್ರತಿಪಕ್ಷಗಳು ಈ ಕಾರ್ಯಾಚರಣೆ ಬಗ್ಗೆ ಸಾಕ್ಷಿಯನ್ನು ಕೇಳುತ್ತಿವೆ. ಈ ಮೂಲಕ ದೇಶವಿರೋಧಿ ಹಾಗೂ ದೇಶದ್ರೋಹಿ ಮನಸ್ಥಿತಿಯನ್ನು ಜಗಜ್ಜಾಹೀರುಗೊಳಿಸಿವೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸೈನಿಕರನ್ನು ಕೊಂದ ಪಾಕ್‌ ಪ್ರೇರಿತ ಉಗ್ರರಿಗೆ ಭಾರತೀಯ ಸೈನ್ಯ ತಕ್ಕ ಶಾಸ್ತಿ ನೀಡಿದೆ. ಈ ವೇಳೆ ಅಚಾನಕ್‌ ಆಗಿ ಭಾರತೀಯ ವಿಂಗ್‌ ಕಮಾಂಡರ್‌ನ ಪ್ಯಾರಾಚೂಟ್‌ ಪಾಕಿಸ್ತಾನದಲ್ಲಿ ಇಳಿದಿದೆ. ಆದರೆ ಸಾಕ್ಷಿ ಕೇಳುವ ಕಾಂಗ್ರೆಸಿಗರ ಮನಸ್ಥಿತಿ ನಮ್ಮನ್ನು ಭಯಗೊಳಿಸುತ್ತಿದೆ ಎಂದು ಅವರು ಹೇಳಿದರು. ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಸೇರಿದಂತೆ ಅನೇಕರು ಈಗ ಸಾಕ್ಷ ್ಯ ಕೇಳುತ್ತಿದ್ದಾರೆ. ಕಾಂಗ್ರೆಸಿಗರಿಂದ ಈ ರೀತಿಯ ಹೇಳಿಕೆ ಸರಿಯಲ್ಲ. ಇದು ದೇಶದ್ರೋಹಕ್ಕೆ ಸಮಾನಾಗಿದೆ. ಬಾಲಾಕೋಟ್‌ ಕಾರ್ಯಾಚರಣೆಯನ್ನು ನಮ್ಮ ದೇಶದ ಜನತೆಯೇ ಅಭಿನಂದಿಸಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಭಾರತಕ್ಕೆ ಆಗಮಿಸುವಾಗ ಇಡಿ ದೇಶವೇ ಸ್ವಾಗತಿಸಿದೆ. ಆದರೆ ಕಾಂಗ್ರೆಸ್‌ ಇದನ್ನು ಚುನಾವಣಾ ವಿಷಯವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ರೀತಿಯಾಗಿ ದೇಶದ ವಿರುದ್ಧ ಮಾತನಾಡುವವರನ್ನು ಪಕ್ಷದಿಂದ ಕಿತ್ತುಹಾಕುವಂತೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಆಗ್ರಹಿಸಿದರು. ಆಪ್‌ ಜತೆ ಮೈತ್ರಿ ಹಾಸ್ಯಾಸ್ಪದ: ದಿಲ್ಲಿಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಆಮ್‌ ಆದ್ಮಿ ಪಕ್ಷದ ಜತೆಗೆ ಕಾಂಗ್ರೆಸ್‌ ಕೈಜೋಡಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಇದರಲ್ಲಿ ವಿಶೇಷ ಏನಿಲ್ಲ, ಯಾಕೆಂದರೆ, ಆಪ್‌ ಪಕ್ಷ ಕಾಂಗ್ರೆಸ್‌ನಿಂದಲೇ ಹುಟ್ಟಿಕೊಂಡಿದೆ. ಬಿಜೆಪಿಯ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಅಡ್ಡಗಾಲು ಹಾಕಲು ಆಪ್‌ನ್ನು ಕಾಂಗ್ರೆಸ್‌ನ್ನು ರಚಿಸಿದೆ. ಈಗ ಆಪ್‌ ಪಕ್ಷ ಕಾಂಗ್ರೆಸ್‌ ಜತೆಗೆ ಕೈಜೋಡಿಸುತ್ತಿರುವುದು ನಗೆ ಪಾಟಲಿನ ಸಂಗತಿ ಎಂದರು. ಸುಮಲತಾಗೆ ಬಿಜೆಪಿ ಬೆಂಬಲ: ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಸುಮಲತಾ ಅವರನ್ನು ಬಿಜೆಪಿ ಬೆಂಬಲಿಸಲಿದೆ. ಅವರು ಬಿಜೆಪಿಗೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ. ಅವರಲ್ಲದೆ ಬಿಜೆಪಿಗೆ ಯಾರು ಬಂದರೂ ಸ್ವಾಗತವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

 

 

About the author

ಕನ್ನಡ ಟುಡೆ

Leave a Comment