ದೇಶ ವಿದೇಶ

ಸೋಲುವ ಭೀತಿಯಿಂದ ಏರ್ ಸ್ಟ್ರೈಕ್: ಇಮ್ರಾನ್ ಖಾನ್ ಧಾಟಿಯಲ್ಲಿ ಮಾತನಾಡಿದ ಸಿಪಿಎಂ ನಾಯಕ

ಕೊಟ್ಟಾಯಂ: ಪಕ್ಷ ಭೇದ ಮರೆತು ಎಲ್ಲ ರಾಜಕೀಯ ನಾಯಕರು ಭಾರತೀಯ ವಾಯು ಸೇನೆ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದರೆ, ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್  ಮಾತ್ರ ಇದಕ್ಕೆ ರಾಜಕೀಯ ಬಣ್ಣ ಬಳಿದಿದ್ದಾರೆ. ಲೋಕ ಸಭಾ ಚುನಾವಣೆಯನ್ನು ಮುಂದೂಡಲು ಬಿಜೆಪಿ ಮತ್ತು ಆರ್‌ಎಸ್ಎಸ್ ನಡೆಸಿದ ಕುತಂತ್ರವಿದು ಎಂದವರು ಪ್ರತಿಪಾದಿಸಿದ್ದಾರೆ.

ಏರ್ ಸ್ಟ್ರೈಕ್ ಆದ ಕೆಲ ಗಂಟೆಗಳ ಬಳಿಕ ಇಡುಕ್ಕಿಯಲ್ಲಿ ಪಕ್ಷದ ರ‍್ಯಾಲಿ ನಡೆಸಿ ಮಾತನಾಡುತ್ತಿದ್ದ ಬಾಲಕೃಷ್ಣನ್, ಲೋಕಸಭಾ ಚುನಾವಣೆಯನ್ನು ಮುಂದಕ್ಕೆ ಹಾಕಲು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡಿರುವ ಕುತಂತ್ರವಿದು. ಸೋಲುವ ಭೀತಿಗೊಳಗಾಗಿರುವ ಬಿಜೆಪಿ ಪಾಕಿಸ್ತಾನ ಯುದ್ಧಕ್ಕೆ ಮುಂದಾಗುವಂತೆ ಕೆಣಕುವ ಮೂಲಕ ಸಮುದಾಯಗಳ ಧ್ರುವೀಕರಣ ಮಾಡುವ ಪ್ರಯತ್ನ ಮಾಡುತ್ತಿದೆ ಎಂದವರು ಹೇಳಿದ್ದಾರೆ.

ಮುಸ್ಲಿಂ ವಿರೋಧಿ ಭಾವನೆಗಳನ್ನು ಪ್ರಚೋದಿಸಿ ಸಾಂಪ್ರದಾಯಿಕ ವಿಭಜನೆ ಮಾಡುವ ಪ್ರಯತ್ನ ಬಿಜೆಪಿಯದು. ಸೋಲಿನ ಭೀತಿಯಿಂದ ಜನರಲ್ಲಿ ಭಯ ಮತ್ತು ಯುದ್ಧದ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಚುನಾವಣೆಯನ್ನು ಮುಂದೂಡುವುದು ಅವರ ತಂತ್ರ. ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸುವುದರ ಬದಲು, ಅಲ್ಲಿನ ಜನರಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುವ ಮೋದಿ ಸರಕಾರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ ಎಂದವರು ಆರೋಪಿಸಿದ್ದಾರೆ.

ಬಾಲಕೃಷ್ಣ ಅವರ ಈ ಹೇಳಿಕೆ ದೇಶದ ಪ್ರಮುಖ ರಾಜಕಾರಣಿಗಳ ಹೇಳಿಕೆಗೆ ತದ್ವಿರುದ್ಧವಾಗಿದೆ. ಅವರನ್ನು ಹೊರತು ಪಡಿಸಿದರೆ ಉಳಿದೆಲ್ಲ ರಾಜಕೀಯ ನೇತಾರರು ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತೆಗೆದುಕೊಂಡಿರುವ ಪ್ರತೀಕಾರವನ್ನು ಹೊಗಳಿದ್ದಾರೆ. ಬಿಜೆಪಿಯ ಕಡು ರಾಜಕೀಯ ವೈರಿಗಳಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಹುಜನ ಸಮಾಜ ಪಾರ್ಟಿ ನಾಯಕಿ ಮಾಯಾವತಿ, ಎನ್‌ಸಿಪಿ ನಾಯಕ ಒಮರ್ ಕೂಡ ವಾಯು ದಾಳಿಯನ್ನು ಶ್ಲಾಘಿಸಿದ್ದಾರೆ.

ವಿಪರ್ಯಾಸವೆಂದರೆ ಬಾಲಕೃಷ್ಣನ್ ಹೇಳಿಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯಂತಿದೆ. ಭಾರತದಲ್ಲಿ ಲೋಕ ಸಭಾ ಚುನಾವಣೆ ಹತ್ತಿರ ಬರುತ್ತಿದ್ದು ರಾಜಕೀಯ ಲಾಭ ಪಡೆದುಕೊಳ್ಳಲು ನಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಖಾನ್ ಹೇಳಿದ್ದರು. ಆದಾಗ್ಯೂ, ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ಸಿಪಿಐ (ಎಮ್) ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವುದು ಈ ಹಿಂದೆ ಕೂಡ ಅನೇಕ ಬಾರಿ ಸಾಬೀತಾಗಿರುವುದರಿಂದ ಬಾಲಕೃಷ್ಣನ್ ಹೇಳಿಕೆಗಳು ಹೆಚ್ಚೇನು ಅಚ್ಚರಿ ಮೂಡಿಸುತ್ತಿಲ್ಲ.

1962ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಪಕ್ಷ ಕಮ್ಯುನಿಷ್ಟ್ ಚೀನಾವನ್ನೇ ಬೆಂಬಲಿಸಿತ್ತು. ಎಷ್ಟರ ಮಟ್ಟಿಗೆ ಎಂದರೆ ಯುದ್ಧದಲ್ಲಿ ಗಾಯಗೊಂಡ ಭಾರತೀಯ ಯೋಧರಿಗೆ ರಕ್ತ ದಾನ ಮಾಡುವುದಕ್ಕೂ ಕೂಡ ವಿರೋಧ ವ್ಯಕ್ತ ಪಡಿಸಿತ್ತು. ಪಾರ್ಲಿಮೆಂಟ್ ದಾಳಿಯ ಆರೋಪಿ ಅಫ್ಜಲ್ ಗುರುವನ್ನು ನೇಣಿಗೇರಿಸುವುದಕ್ಕೆ ಸಹ ವಿರೋಧ ವ್ಯಕ್ತ ಪಡಿಸಿತ್ತು ಮತ್ತು ತೀವ್ರವಾಗಿ ಖಂಡಿಸಿತ್ತು.

About the author

ಕನ್ನಡ ಟುಡೆ

Leave a Comment