ಪರಿಸರ

ಸ್ಕೂಬಾ ಡೈವಿಂಗ್‌ನಿಂದ ಮೀನುಗಾರಿಕೆಗೆ ತೊಂದರೆ ಇಲ್ಲ: ನಕುಲ್‌ 

ಕಾರವಾರ:ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ಚಟುವಟಿಕೆ ನಡೆಯುವುದರಿಂದ ಮೀನುಗಾರಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಸ್ಪಷ್ಟಪಡಿಸಿದರು.
ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ ಚಟುವಟಿಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಸೋಮವಾರ
ಮುರ್ಡೇಶ್ವರ ನಾಡದೋಣಿ ಮೀನುಗಾರರ ಸಂಘದ ನೇತೃತ್ವದಲ್ಲಿ ಬಂದಿದ್ದ ಮೀನುಗಾರ ಮುಖಂಡರ ಜತೆ ಜಿಲ್ಲಾಧಿಕಾರಿ ಚರ್ಚಿಸಿದರು.
ಜಗತ್ತಿನೆಲ್ಲೆಡೆ ಸ್ಕೂಬಾ ಡೈವಿಂಗ್‌ ಇರುವ ಕಡೆಗಳಲ್ಲಿ ಮೀನುಗಾರಿಕೆಯೂ ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತಿದೆ. ನೇತ್ರಾಣಿ ದ್ವೀಪದ ಎಂಟು ಸ್ಥಳಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಎರಡು ಕಡೆ ಮಾತ್ರ ಸ್ಕೂಬಾ ಡೈವಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಜತೆಗೆ ಟೆಂಡರ್‌ದಾರರಿಗೆ ಹಲವು ಷರತ್ತುಗಳನ್ನು ಸಹ ಹಾಕಿದ್ದು, ಈ ಸ್ಥಳದಲ್ಲಿ ಜಿಲ್ಲಾಡಳಿತವು ಮೀನುಗಾರಿಕೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಹೀಗಿರುವಾಗ ಮೀನುಗಾರರಿಗೆ ಹೇಗೆ ತೊಂದರೆ ಆಗುತ್ತದೆ ಎಂದು ಪ್ರಶ್ನಿಸಿದರು.
ಉದ್ಯೋಗವಕಾಶ ವೃದ್ಧಿ:
ರಾಜ್ಯದ ಕರಾವಳಿ ತೀರದಲ್ಲಿಯೇ ನೇತ್ರಾಣಿ ದ್ವೀಪದ ಬಳಿ ಸ್ಕೂಬಾ ಡೈವಿಂಗ್‌ಗೆ ಹೆಚ್ಚು ಪ್ರಶಸ್ತವಾಗಿದೆ. ಈ ಚಟುವಟಿಕೆಯಿಂದ ಮೀನುಗಾರರು ಹಾಗೂ ಸ್ಥಳೀಯರಿಗೆ ಹೆಚ್ಚಿನ ಲಾಭ ಆಗಲಿದೆ. ಹೆಚ್ಚೆಚ್ಚು ಪ್ರವಾಸಿಗರು ಬರುವುದರಿಂದ ಸ್ಥಳೀಯವಾಗಿ ಹಲವು ರೀತಿಯ ಉದ್ಯೋಗವಕಾಶಗಳು ಹೆಚ್ಚುತ್ತವೆ ಎಂದು ಹೇಳಿದರು.
ತಪ್ಪು ಕಲ್ಪನೆ:
ಮುರ್ಡೇಶ್ವರದ ಮೀನುಗಾರರಲ್ಲಿಯೇ ಎರಡು ಪಂಗಡಗಳು ನಿರ್ಮಾಣವಾಗಿದ್ದು, ಒಂದು ಪಂಗಡ ಸ್ಕೂಬಾ ಡೈವಿಂಗ್್್್ ನ್ನು ಬೆಂಬಲಿಸಿದರೆ ಮತ್ತೊಂದು ಪಂಗಡ ಇದರಿಂದ ಮೀನುಗಾರಿಕೆಗೆ ತೊಂದರೆ ಉಂಟಾಗುತ್ತದೆ ಎಂದು ತಪ್ಪು ಕಲ್ಪನೆಯನ್ನು ಸ್ಥಳೀಯರಲ್ಲಿ ಬಿತ್ತುತ್ತಿದೆ. ವೈಯಕ್ತಿವಾಗಿ ತಮ್ಮ ತಮ್ಮಲ್ಲಿಯೇ ಭಿನ್ನಾಭಿಪ್ರಾಯ ಇದ್ದರೂ ಸಹ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ಕೇಳಿಕೊಂಡರು.
ನಿರ್ದಾಕ್ಷಿಣ್ಯ ಕ್ರಮ:
ನೇತ್ರಾಣಿ ದ್ವೀಪಕ್ಕೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ಸ್ಥಳೀಯ ಮೀನುಗಾರರು ಹಲ್ಲೆ ನಡೆಸಿದ ಪ್ರಕರಣಗಳು ನಡೆದಿವೆ. ಇದರಿಂದ ಉತ್ತರ ಕನ್ನಡ ಜಿಲ್ಲೆಗೆ ಕಪ್ಪುಚುಕ್ಕೆ ಬರುತ್ತದೆ. ತಪ್ಪಿತಸ್ಥರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ಪಿ.ಎಂ.ತಾಂಡೇಲ್‌, ಸದಾನಂದ ಹರಿಕಂತ್ರ, ಕೃಷ್ಣ ಹರಿಕಂತ್ರ, ರಾಜೇಶ ಹರಿಕಂತ್ರ, ನಾಗರಾಜ ಹರಿಕಂತ್ರ ಇದ್ದರು.
———————————————————————–
ಜಲಚರಗಳಿಗೆ ತೊಂದರೆ 
ಸ್ಕೂಬಾ ಡೈವಿಂಗ್ ನವರು ವಿಶೇಷ ಬಟ್ಟೆ ತೊಟ್ಟು ಸಮುದ್ರಕ್ಕೆ ಇಳಿದಾಗ ಆ ಪ್ರದೇಶದಲ್ಲಿದ್ದ ಮೀನುಗಳು ಹೆದರಿ ಬೇರೆಡೆ ಪ್ರಯಾಣಿಸುತ್ತವೆ. ಅಲ್ಲದೇ ಇದರಿಂದ ಮೀನುಗಳ ಮೊಟ್ಟೆಗಳು ನಾಶವಾಗಿ, ಮೀನುಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತದೆ ಎಂದು ಮೀನುಗಾರ ಮುಖಂಡರು ಜಿಲ್ಲಾಧಿಕಾರಿ ಬಳಿ ಹೇಳಿಕೊಂಡರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಸ್ಕೂಬಾ ಡೈವಿಂಗ್ ನಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಇನ್ನೊಮ್ಮೆ ಮೀನುಗಾರ ಮುಖಂಡರಿಗೆ ಸ್ಪಷ್ಟಪಡಿಸಿದರು. 
ಮೀನುಗಾರರಲ್ಲಿ ವೈಮನಸ್ಸು ಉದ್ಭವ 
ಲೈಟ್‌ ಫಿಶಿಂಗ್‌ ಹಾಗೂ ಸ್ಕೂಬಾ ಡೈವಿಂಗ್‌ ವಿಚಾರದಲ್ಲಿ ಮೀನುಗಾರರ ನಡುವೆಯ ವೈಮನಸ್ಸು ಇರುವುದು ನಿಜ. 
–ಸದಾನಂದ ಹರಿಕಂತ್ರ, ಜಿಲ್ಲಾ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ 
ಮೀನುಗಾರರ ಬೆನ್ನಿಗೆ ಜಿಲ್ಲಾಡಳಿತ ಸದಾ ಇದೆ. ಮೀನುಗಾರಿಕೆ ಜತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕರಿಸಿ.
–ಎಸ್‌.ಎಸ್‌.ನಕುಲ್‌, ಜಿಲ್ಲಾಧಿಕಾರಿ 

About the author

ಕನ್ನಡ ಟುಡೆ

1 Comment

Leave a Comment