ದೇಶ ವಿದೇಶ

ಸ್ಟಡಿ ಇನ್ ಇಂಡಿಯಾಕ್ಕೆ ಕೇಂದ್ರ ಅಸ್ತು

ಭಾರತದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ‘ಸ್ಟಡಿ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆಗೂಡಿ ಒಪ್ಪಿಗೆ ನೀಡಿದೆ. ಅಲ್ಲದೆ, ಇದಕ್ಕೆಸಂಬಂಧಿಸಿದ ವೆಬ್ಸೈಟ್‌ಗೆ ಕೂಡಚಾಲನೆ ನೀಡಲಾಗಿದೆ.  ಇದು ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ ಹಾಗೂ ಕೆನಡಾ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ರೂಪಿಸಿರುವ ಕಾರ್ಯಕ್ರಮದ ಮಾದರಿಯಲ್ಲಿ ಇರಲಿದೆ. ಭಾರತದಲ್ಲಿ ಅಧ್ಯಯನ ಕೈಗೊಳ್ಳುವ ವಿದೇಶಿ ವಿದ್ಯಾರ್ಥಿಗಳ ಪ್ರಮಾಣವನ್ನು ಹೆಚ್ಚಿಸುವ ಜತೆಗೆ ಭಾರತೀಯ ಶಿಕ್ಷಣಸಂಸ್ಥೆಗಳ ಜಾಗತಿಕ ರಾಂಕಿಂಗ್  ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.

ವೆಬ್ಸೈಟ್ಗೆ  ಚಾಲನೆ: 

ಈ ಕಾರ್ಯಕ್ರಮದ ಭಾಗವಾಗಿ ರೂಪಿಸಿರುವ WWW. studyinindia.gov.in ವೆಬ್‌ಸೈಟ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ  ಸ್ವರಾಜ್ ಹಾಗು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯಸಚಿವ ಸತ್ಯಪಾಲ್ ಸಿಂಗ್ ದೆಹಲಿಯಲ್ಲಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಈ  ವೆಬ್ಸೈಟ್ ಮೂಲಕ  ದಕ್ಷಿಣ ಏಷ್ಯಾ, ಆಫ್ರಿಕಾ ಹಾಗೂ ಪಶ್ಚಿಮ ಏಷ್ಯಾದ 30 ರಾಷ್ಟ್ರಗಳ ವಿದ್ಯಾರ್ಥಿಗಳು ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು. ನ್ಯಾಕ್ ಹಾಗು ಎನ್‌ ಐ ಆರ್‌ ಎಫ್ ರಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ 15ರ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಆರಿಸಿಕೊಳ್ಳಲು ವಿದೇಶಿ ವಿದ್ಯಾರ್ಥಿಗಳಿಗೆ ಈ ವೆಬ್ಸೈಟ್ ಮೂಲಕ ಅವಕಾಶ ನೀಡಿದೆ.

ರಕ್ಷಣಾ ಯೋಜನಾ ಸಮಿತಿ ರಚನೆ

ವಿದೇಶಿ ಸಂಸ್ಥೆಗಳೊಂದಿಗೆ ಮಾಡುವ ರಕ್ಷಣಾ ಒಪ್ಪಂದಗಳು, ಮಿಲಿಟರಿ ಮತ್ತು ಭದ್ರತಾ ತಂತ್ರಗಾರಿಕೆ ಬಗ್ಗೆ ನಿಗಾವಹಿಸುವ ಸಲುವಾಗಿ ಕೇಂದ್ರ ಸರ್ಕಾರ ರಕ್ಷಣಾ ಯೋಜನಾ ಸಮಿತಿಯನ್ನು ರೂಪಿಸಿದೆ. ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಇದು ಶಾಶ್ವತ ಸಮಿತಿಯಾಗಿರಲಿದ್ದು, ರಕ್ಷಣಾ ತಂತ್ರಗಾರಿಕೆ ಮತ್ತು ವಿದೇಶಿ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ನಿಗಾವಹಿಸಲಿದೆ ಮತ್ತು ಇದಕ್ಕೆ ಸಂಬಂಧಿಸಿ ಶಿಫಾರಸುಗಳನ್ನು ಕೇಂದ್ರಕ್ಕೆ ಸಲ್ಲಿಸಲಿದೆ.

ಯಾರಾರು ಇರುತ್ತಾರೆ?

ಸಿಬ್ಬಂದಿ ಸಮಿತಿಯ ಅಧ್ಯಕ್ಷರು, ಸೇವಾಮುಖ್ಯಸ್ಥರು, 5 ರಕ್ಷಣಾ ಕಾರ್ಯದರ್ಶಿಗಳು, ವಿದೇಶಾಂಗ ಕಾರ್ಯದರ್ಶಿ, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಸದಸ್ಯರಾಗಿರಲಿದ್ದಾರೆ.

ರಚನೆ:

ರಕ್ಷಣಾ ಯೋಜನಾ ಸಮಿತಿಯಲ್ಲಿ ನಾಲ್ಕುಉಪ ಸಮಿತಿಗಳಿರಲಿವೆ.

ಅವುಗಳೆಂದರೆ 1. ಯೋಜನೆ ಮತ್ತು ತಂತ್ರ, 2. ರಕ್ಷಣಾ ರಾಜತಾಂತ್ರಿಕತೆ, 3.  ಯೋಜನೆ ಮತ್ತು ಸಾಮರ್ಥ್ಯ ಅಭಿವೃದ್ಧಿ, 4. ರಕ್ಷಣಾ ಶಸ್ತ್ರಾಸ್ತ್ರ ಉತ್ಪಾದನಾ ವ್ಯವಸ್ಥೆ. ಈ ನಾಲ್ಕೂ ಉಪಸಮಿತಿಗಳ ಸದಸ್ಯರು ಮತ್ತು ಅವರ ಸೇವಾವಧಿಯನ್ನು ಪ್ರತ್ಯೇಕವಾಗಿ ನಿರ್ಧರಿಸಲು ತೀರ್ಮಾನಿಸಲಾಗಿದೆ. ವಿದೇಶಾಂಗ ಕಾರ್ಯದರ್ಶಿ ಮತ್ತು ಹಣಕಾಸು ಸಚಿವಾಲಯದ ಖರ್ಚುವೆಚ್ಚಗಳ ಕಾರ್ಯದರ್ಶಿಗಳು ಇದರ ಸದಸ್ಯರಾಗಿರಲಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗ ವಿವಿಧ ಸಚಿವಾಲಯಗಳ ನಡುವೆ ಸಹಯೋಗ ತರುವ ಕಾರ್ಯವನ್ನು ಇವರು ನಿಭಾಯಿಸಲಿದ್ದಾರೆ.

 1. ಯೋಜನೆಮತ್ತು ತಂತ್ರಗಾರಿಕೆ:ವಿದೇಶಗಳಿಂದ ಎದುರಾಗಲಿರುವ ಸಮಸ್ಯೆಗಳನ್ನು ಅಳೆಯುವುದು, ರಕ್ಷಣೆ ಮತ್ತು ಭದ್ರತಾ ಅಗತ್ಯಗಳೇನು ಎನ್ನುವುದನ್ನು ಪರಿಶೀಲಿಸುವುದು , ಮಿಲಿಟರಿ ಮತ್ತು ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆ ರೂಪುಗೊಳಿಸುವುದು ಮತ್ತು ಪುನರಾವಲೋಕನ ನಡೆಸುವುದು.
 2. ರಕ್ಷಣಾರಾಜತಾಂತ್ರಿಕತೆ: ವಿದೇಶಿ ಯೋಜನೆಗಳ ಅಗತ್ಯ ಏನು ಎನ್ನುವುದನ್ನು ಪರಿಶೀಲಿಸುವುದು. ವಿದೇಶಿ ಶಸ್ತ್ರಾಸ್ತ್ರ ಖರೀದಿ ಮತ್ತು ಮಾರಾಟವನ್ನು ಗುರುತಿಸುವುದು.
 3. ಯೋಜನೆಮತ್ತು ಸಾಮರ್ಥ್ಯ ಅಭಿವೃದ್ಧಿ: ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಬೇರೆ ಬೇರೆ ಸಚಿವಾಲಯಗಳು ಹೇಗೆ ಒಗ್ಗೂಡಿ ಕಾರ್ಯ ನಿರ್ವಹಿಸಬಹುದೆಂದು ಪರಿಶೀಲಿಸುವುದು. ಸಾಮರ್ಥ್ಯ ಅಭಿವೃದ್ದಿ ಯೋಜನೆ ರೂಪಿಸುವುದು ಮತ್ತು ಜಾರಿಗೆ ತಂದು ನಿಗಾವಹಿಸುವುದು. ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವುದು ಮತ್ತು ವಾರ್ಷಿಕ ಬಜೆಟ್‌ನಲ್ಲಿ ಸೂಕ್ತ ಮೊತ್ತ ಮೀಸಲಿಡುವಂತೆ ಮಾಡುವುದು.
  1. ರಕ್ಷಣಾಶಸ್ತ್ರಾಸ್ತ್ರಉತ್ಪಾದನಾವ್ಯವಸ್ಥೆ:ರಕ್ಷಣಾ ಶಸ್ತ್ರಾಸ್ತ್ರ ಕ್ಷೇತ್ರದ ಸಂಶೋಧನೆ ಮತ್ತು ಅಧ್ಯಯನದ ಬಗ್ಗೆ ಕರಡು ಸಿದ್ಧಪಡಿಸುವುದು. ರಕ್ಷಣಾ ರಫ್ತು ಪ್ರಮಾಣ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸುವುದು.
 4. ಕಾರ್ಯ ನಿರ್ವಹಣೆ ಹೇಗೆ ?
  ವಿದೇಶಗಳಿಂದ ಎದುರಾಗಲಿರುವ ರಕ್ಷಣಾ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ.

  * ರಕ್ಷಣಾ ವ್ಯವಸ್ಥೆಯ ಆದ್ಯತೆ ಏನು ಎಂಬುದನ್ನು ರೂಪಿಸುತ್ತದೆ.

  * ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆ ಸಿದ್ದತೆ, ರಕ್ಷಣಾ ಕ್ಷೇತ್ರದ ಅಭಿವೃದ್ದಿ ಯೋಜನೆಗಳಿಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಳ್ಳಲು ಸಚಿವಾಲಯಗಳ ಮನವೊಲಿಸುವಿಕೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನಿಗದಿತ ಮೊತ್ತ ಮೀಸಲಿಡಲು ವಿವಿಧ ಸಚಿವಾಲಯಗಳ ಮೇಲೆ ಒತ್ತಡ ಹೇರುತ್ತವೆ.

  * ದೇಶದಲ್ಲಿ ರಕ್ಷಣಾ ತಂತ್ರಜ್ಞಾ ಮತ್ತು ಶಸ್ತ್ರಾಸ್ತ್ರಗಳ ಹೆಚ್ಚಳ ಹೇಗೆ ಸಾಧ್ಯ ಎಂಬುದರ ಬಗ್ಗೆ ಯೋಜನೆ ರೂಪಿಸುತ್ತದೆ. ರಕ್ಷಣಾ ರಫ್ತು ವರ್ಧನೆಗೆ ಒತ್ತು ನೀಡುತ್ತದೆ. ಇದು ತನ್ನ ಎಲ್ಲ ವರದಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸುತ್ತದೆ.

  ಹಿನ್ನಲೆ:

  ವಿದೇಶಗಳಿಂದ ದಾಳಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ ಮತ್ತು ಶಸ್ತ್ರಾಸ್ತ್ರಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿರುವುದನ್ನು ತಪ್ಪಿಸುವ ಸಲುವಾಗಿ ಒಂದು ಸಮಿತಿ ರಚನೆ ಅಗತ್ಯವಾಗಿತ್ತು. ಸದ್ಯದ ವ್ಯವಸ್ಥೆಯಲ್ಲಿ ಸ್ಥಳೀಯ ಅಗತ್ಯಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಾಧ್ಯವಿಲ್ಲ. ಹೀಗಾಗಿ ರಕ್ಷಣಾ ವ್ಯವಸ್ಥೆಗೆ ಸೀಮಿತವಾಗಿರುವ ಸಮಿತಿಯ ಅಗತ್ಯ ಮನಗಂಡು ಇದನ್ನು ರೂಪಿಸಲಾಗಿದೆ.

About the author

ಕನ್ನಡ ಟುಡೆ

Leave a Comment