ರಾಜ್ಯ ಸುದ್ದಿ

ಹಂಪಿ ಉತ್ಸವ ಅದ್ದೂರಿಯಾಗೇ ನಡೆಯಲಿ, ಆರ್ಥಿಕ ನೆರವು ನಾನು ನೀಡುವೆ: ಜನಾರ್ಧನ ರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಬರವಿದ್ದು ಹಂಪಿ ಉತ್ಸವವನ್ನು ಸರಳವಾಗಿ ಆಚರಿಸುತ್ತೇವೆ ಎಂದು ಹೇಳಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ  ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಹಂಪಿ ಉತ್ಸವಕ್ಕೆ ತನ್ನದೇ ಆದ ಪರಂಪರೆ ಇದೆ, ಇದನ್ನು ಅದ್ದೂರಿಯಾಗೇ ಆಚರಿಸೋಣ, ಆರ್ಥಿಕ ನೆರವು ಸೇರಿ ಯಾವುದೇ ಸಹಕಾರ ನೀಡಲು ನಾನು ಸಿದ್ದನಿದ್ದೇನೆ ಎಂದು ಅವರು ಘೋಷಿಸಿದ್ದಾರೆ.
ಫೇಸ್‌ಬುಕ್‌ ಪೋಸ್ಟ್ ನಲ್ಲಿ ಜನಾರ್ಧನ ರೆಡ್ಡಿ ಈ ಸಂಬಂಧ ಸುದೀರ್ಘ ಬರಹವನ್ನೇ ಪ್ರಕಟಿಸಿದ್ದಾರೆ.”ಹಂಪಿ ಉತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗೇ ನಡೆಯಬೇಕು, ನಿಮಗೆ ಕೃತಜ್ಞತಾ ಸಮಾವೇಶ ಮಾಡೋಕೆ ಕೋಟಿ ಕೋಟಿ ಹಣ ಇದೆ, ಉಪ ಚುನಾವಣೆ ಗೆಲ್ಲೋಕೆ ಹಣವನ್ನು ನೀರಿನಂತೆ ಖರ್ಚು ಮಾಡಿದ್ದೀರಿ.ಆದರೆ ಹಂಪಿ ಉತ್ಸವ ವಿಚಾರದಲ್ಲಿ ಮಾತ್ರ ನಿಮಗೆ ಬರದ ಸಮಸ್ಯೆ ಕಾಡುತ್ತಿದೆ. ಹಂಪಿ ಉತ್ಸವ ನಡೆಸೋಕೆ ನಿಮ್ಮ ಕೈಲಾಗದೆ ಹೋದರೆ ಹೇಳಿ, ನಾನೇ ದುಡ್ಡು ಕೊಡುತ್ತೇನೆ, ಅದ್ದೂರಿಯಾಗಿ ಆಚರಿಸಿ” ಎಂದು ಗುಡುಗಿದ್ದಾರೆ. ಬಳ್ಳಾರಿಗೆ ತಾನು ಬರದೇ ಹೋದರೂ ಸಹ ಜಿಲ್ಲೆಯ ಜನರಿಗಾಗಿ ನಾನು ಆರ್ಥಿಕ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ರೆಡ್ಡಿ ಹೇಳಿದ್ದಾರೆ.
ಡಿಕೆಶಿ ತಿರುಗೇಟು: ಜನಾರ್ಧನ ರೆಡ್ಡಿ ಹಂಪಿ ಉತ್ಸವಕ್ಕೆ ಆರ್ಥಿಕ ನೆರವು ನೀಡುವುದಾಗಿ ಹೇಳಿದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಸಹ ರೆಡ್ಡಿಗೆ ತಿರುಗೇಟು ನೀಡಿದ್ದಾರೆ”ಸರ್ಕಾರದಲ್ಲಿ ಹಣವಿಲ್ಲದೆ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲ್ಲ ಎಂದು ಹೇಳಿದ್ದಲ್ಲ. ನಾಡಿನಲ್ಲಿ ಬರ ಪರಿಸ್ಥಿತಿ ಇರುವ ಕಾರಣಕ್ಕೆ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತದೆ.  ಆದರೂ ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಉತ್ಸವ ಆಚರಿಸುವ ಕುರಿತು ಚಿಂತನೆ ನಡೆದಿದೆ” ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment