ರಾಜಕೀಯ

ಹಣ, ಹೆಂಡ, ತೋಳ್ಬಲದಿಂದ ಚುನಾವಣೆಗೆ ಇಳಿದವರಿಗೆ ತಕ್ಕ ಉತ್ತರ ನೀಡುತ್ತೇವೆ: ಯಡಿಯೂರಪ್ಪ

ಶಿವಮೊಗ್ಗ: ಸರ್ಕಾರ ಅಧಿಕಾರಕ್ಕೆ ಬಂದ 5 ತಿಂಗಳ ಅವಧಿಯಲ್ಲಿ ಜನರಿಗೆ ಭಾಗ್ಯಲಕ್ಷ್ಮೀ ಬಾಂಡ್​ ನೀಡಿಲ್ಲ. ಬಡವರ ಪರ ಸರ್ಕಾರಕ್ಕೆ ಇರುವ ಕಾಳಜಿಗೆ ಇದು ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಎಂದು ಕಿಡಿ ಕಾರಿದರು.

ಆಯನೂರಿನಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ಹಣ, ಹೆಂಡ, ಜಾತಿ, ತೋಳ್ಬಲದಿಂದ ಚುನಾವಣೆಗೆ ಇಳಿದವರಿಗೆ ಈ ಸಭೆ ಉತ್ತರ ನೀಡಿದೆ. ಈಗ ಚುನಾವಣೆಗೆ ಸ್ಪರ್ಧಿಸಿದವರು ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಜನರು ಮತ ಚಲಾಯಿಸಿ ಎಂದರು.
ಮುಖ್ಯಮಂತ್ರಿ ಯಾವ ಮುಖ ಇಟ್ಟುಕೊಂಡು ಇಲ್ಲಿಗೆ ಬಂದು ಮತ ಕೇಳುತ್ತಾರೆ? ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರ ಶವ ಸಂಸ್ಕಾರಕ್ಕೆ ಹಣ ನೀಡುವ ಯೋಜನೆ ರೂಪಿಸಿದ್ದೆ. ಆದರೆ, ಆ ಹಣವನ್ನೂ ಈಗಿನ ಮುಖ್ಯಮಂತ್ರಿ ಸಾಲಮನ್ನಾಕ್ಕೆ ಬಳಸಿಕೊಂಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿದರು.

ಉಪಚುನಾವಣೆ ಮುಗಿಯುವವರೆಗೆ ವಿಧಾನಸೌಧದ ಬಾಗಿಲು ಹಾಕಿಬಿಡಿ. ಬಳ್ಳಾರಿ ಪ್ರಚಾರಕ್ಕೆ 60 ಮಂದಿ ಹೋಗುತ್ತಾರಂತೆ. ಶಿವಮೊಗ್ಗಕ್ಕೆ ಇನ್ನೆಷ್ಟು ಜನರು ಬರುತ್ತಾರೆ ಗೊತ್ತಿಲ್ಲ. ವಿಧಾನಸೌಧಕ್ಕೆ ಹೋಗುವವರು ಯಾರೂ ಇಲ್ಲ. ಹಾಗಾಗಿ ಅದರ ಬಾಗಿಲು ಹಾಕುವುದೇ ಉತ್ತಮ. ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿಯ ಬಾಯಿ ಮುಚ್ಚಿಸಬಹುದು. ಈಗಾಗಲೇ ಕಾಂಗ್ರೆಸ್, ಜೆಡಿಎಸ್​ ಮುಖಂಡರು ಒಬ್ಬರ ಮುಖ, ಇನ್ನೊಬ್ಬರು ನೋಡಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಸರ್ಕಾರ ಬೀಳುತ್ತದೆ ಗೊತ್ತಿಲ್ಲ ಎಂದರು.

ಸಿದ್ದಲಿಂಗ ಶ್ರೀಗಳಿಗೆ ಸಂತಾಪ: ಗದುಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ ನಿಧನಕ್ಕೆ ಬಿ.ಎಸ್​.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದರು. ಪೂಜ್ಯರನ್ನು ಕಳೆದುಕೊಂಡು ಇಡೀ ರಾಜ್ಯ ಬಡವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು ಎಂದರು. ಲೋಕಸಭೆ ಉಪಚುನಾವಣೆ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಪ್ರಚಾರ ನಡೆಸಲಾಯಿತು.

ಉನ್ನತ ಸಮಿತಿ ಸಭೆ : ಇದಕ್ಕೂ ಮೊದಲು ಶಿವಮೊಗ್ಗದ ಯಡಿಯೂರಪ್ಪನವರ ನಿವಾಸದಲ್ಲಿ ಉನ್ನತ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಶಾಸಕ ಕೆ.ಎಸ್​.ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ ಮತ್ತಿತರರು ಭಾಗವಹಿಸಿದ್ದರು.

About the author

ಕನ್ನಡ ಟುಡೆ

Leave a Comment