ರಾಜ್ಯ ಸುದ್ದಿ

ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ

ಬೆಳಗಾವಿ: ಕೇಂದ್ರದ ಕಾರ್ಯಕ್ರಮಗಳು ಹಾಗೂ ಹಲವು ಯೋಜನೆಗಳಿಗೆ ಬಿಡುಗಡೆಯಾದ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ರಾಜ್ಯದಲ್ಲಿ ಹಿಟ್ಲರ್ ದರ್ಬಾರು ನಡೆಯುತ್ತಿದೆ. ಹಲವು ದೇವಸ್ಥಾನಗಳನ್ನು ಸುತ್ತಿದರೂ ಸಿಎಂ ಕುಮಾರಸ್ವಾಮಿ ಅವರಿಗೆ ದೇವರು ಬುದ್ಧಿ ಕೊಡಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಕುಂದಾ ನಗರಿಯಲ್ಲಿ ಸೋಮವಾರ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಮಾತನಾಡಿದ ಅವರು ಈ ರೈತ ಸಮಾವೇಶ ಕೇವಲ ಆರಂಭವಷ್ಟೇ, ನಮ್ಮ ರೈತ ಹೋರಾಟ ಮುಂದುವರಿಯುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಅಂಧಾದರ್ಬಾರ ನಡೆಯುತ್ತಿದೆ: ಮಾತೃಪೂರ್ಣ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದೆ. ಕೇಂದ್ರ ಸರ್ಕಾರ ಬೆಂಗಳೂರು ಕ್ಲೀನ್ ಸಿಟಿಗೆ 650 ಕೋಟಿ ರೂ. ನೀಡಿತ್ತು. ಆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಬಿಬಿಎಂಪಿ ಆಡಳಿತ 6 ತಿಂಗಳಲ್ಲಿ 650 ಕೋಟಿ ರೂ. ಗಳನ್ನು ಗುಳಂ ಮಾಡಿದೆ ಎಂದು ಆರೋಪಿಸಿದರು.

ಒಂದು ಅಧಿವೇಶನಕ್ಕೆ ಮಾತ್ರ ಸೀಮಿತ: ಬೆಳಗಾವಿಯ ಸುವರ್ಣಸೌಧ ಉತ್ತರ ಕರ್ನಾಟಕದ ಧ್ವನಿಯಾಗಬೇಕಿತ್ತು. ಆದರೆ, ವರ್ಷಕ್ಕೆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಿದೆ. ಪ್ರಮುಖ ಇಲಾಖೆಗಳು ಸುವರ್ಣಸೌಧಕ್ಕೆ ವರ್ಗವಣೆಯಾಗಿಲ್ಲ. ರೈತರ ಹೋರಾಟದ ಬಗ್ಗೆ ಸಿಎಂ ಕೇವಲವಾಗಿ ಮಾತನಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುವಂತಹ ಹೇಳಿಕೆಯನ್ನು ಸಿಎಂ ನೀಡುತ್ತಿದ್ದಾರೆ ಎಂದು ಟೀಕಿಸಿದರು.

6 ತಿಂಗಳಾದರೂ ಸಾಲಮನ್ನಾ ಇಲ್ಲ: ಧರ್ಮಸ್ಥಳ ಮತ್ತು ಶಾರದಾಂಬೆ ಮುಂದೆ ನಿಂತು ಸಿಎಂ ಸಾಲಮನ್ನಾ ಘೋಷಣೆ ಮಾಡಿದ್ದರು. ಆದರೆ, 6 ತಿಂಗಳಾದರೂ ಸಾಲಮನ್ನಾ ಇಲ್ಲ. ಇದೇ ವೇಳೆ ಸಭಿಕರನ್ನು ಉದ್ದೇಶಿಸಿ ಸಾಲಮನ್ನಾ ಆಗಿದೆಯಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು. ಇದಕ್ಕೆ ರೈತರಿಂದ ಕೈ ಎತ್ತಿ ಸಾಲಮನ್ನಾ ಆಗಿಲ್ಲ ಎಂದು ಘೋಷಣೆ ಕೂಗಿದರು.

About the author

ಕನ್ನಡ ಟುಡೆ

Leave a Comment