ರಾಜಕೀಯ

ಹಳೆ ಮೈಸೂರಲ್ಲಿ ಮೈತ್ರಿಗೆ ತೀವ್ರ ವಿರೋಧ

ಬೆಂಗಳೂರು : ಜೆಡಿಎಸ್‌ ಸಮಾವೇಶದಲ್ಲಿ ಎಚ್‌ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದರ ನಡುವೆಯೇ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಹಳೆ ಮೈಸೂರು ಭಾಗದ ಕಾಂಗ್ರೆಸ್‌ ಮುಖಂಡರ ಸಭೆ ನಡೆಸಿ ತಮ್ಮ ಬಲ ಪ್ರದರ್ಶಿಸಿದ್ದಾರೆ. ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುವುದಕ್ಕೆ ಕಾಂಗ್ರೆಸ್‌ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಂಡ್ಯ ಹಾಗೂ ಹಾಸನದ ಪೈಕಿ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಲೇಬೇಕು ಎಂಬ ಒತ್ತಡ ತಂದಿದ್ದಾರೆ.

ಮಂಡ್ಯ, ಹಾಸನ, ಮೈಸೂರು-ಕೊಡಗು, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳ ಕಾಂಗ್ರೆಸ್‌ ಮುಖಂಡರ ಈ ಸಭೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಹಾಜರಿದ್ದರು. ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇರ ಎದುರಾಳಿಗಳಾಗಿವೆ. ಹಾಗಾಗಿ ಅನಿವಾರ್ಯದ ಮೈತ್ರಿಯನ್ನು ಒಪ್ಪಿಕೊಳ್ಳಲು ಈ ಭಾಗದ ಕಾಂಗ್ರೆಸ್‌ ಮುಖಂಡರು ಹಾಗೂ ಕೆಳಹಂತದ ಕಾರ್ಯಕರ್ತರು ಈಗಲೂ ಸಿದ್ಧರಿಲ್ಲ. ಜೆಡಿಎಸ್‌ನೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್‌ ಅಸ್ತಿತ್ವಕ್ಕೆ ಕುತ್ತು ಬರುತ್ತದೆ ಎನ್ನುವುದು ಇಲ್ಲಿನ ಮುಖಂಡರ ಆತಂಕವಾಗಿದೆ. ಸಭೆಯಲ್ಲಿ ಈ ವಿಚಾರವಾಗಿಯೇ ಸುದೀರ್ಘ ಚರ್ಚೆ ನಡೆಯಿತು.

ಹಳೆ ಮೈಸೂರಿನ ಕ್ಷೇತ್ರಗಳಲ್ಲಿ ಮೈತ್ರಿಯ ಅಗತ್ಯವೇ ಇಲ್ಲವೆಂದು ಮಾಜಿ ಸಚಿವರಾದ ಎ.ಮಂಜು, ಚಲುವರಾಯಸ್ವಾಮಿ ಮತ್ತಿತರರು ಪಟ್ಟು ಹಾಕಿದರು. ಆದರೆ, ಹೈಕಮಾಂಡ್‌ನ ಸ್ಪಷ್ಟ ನಿರ್ದೇಶನ ಇರುವುದರಿಂದ ಒಟ್ಟಿಗೆ ಚುನಾವಣೆ ಎದುರಿಸಲಾಗುತ್ತಿದೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಏನೇ ಸಮಸ್ಯೆಯಿದ್ದರೂ ನಾಲ್ಕು ಗೋಡೆಯ ಮಧ್ಯೆ ಪ್ರಸ್ತಾಪಿಸಿ ಬಗೆಹರಿಸಿಕೊಳ್ಳಬೇಕು. ಪಾರ್ಲಿಮೆಂಟ್‌ ಎಲೆಕ್ಷನ್‌ಗೆ ತೆರೆಬೀಳುವ ವರೆಗೆ ಈ ವಿಚಾರವಾಗಿ ಯಾರೂ ತುಟಿಪಿಟಿಕ್‌ ಎನ್ನಕೂಡದೆಂದು ಸಿದ್ದರಾಮಯ್ಯ ಸೂಚಿಸಿದರು ಎನ್ನಲಾಗಿದೆ.

ಅವರಿಗೂ ಬೀಗ ಹಾಕಿ ”ನಮಗೆ ಮಾತ್ರ ಬಾಯಿಮುಚ್ಚಿಕೊಂಡಿರಲು ಹೇಳುತ್ತೀರಿ. ಜೆಡಿಎಸ್‌ನವರಿಗೂ ಈ ಸೂಚನೆ ನೀಡಿ. ಕುಮಾರಸ್ವಾಮಿ ಅವರೇ ತಮ್ಮನ್ನು ವಿಷಕಂಠನಿಗೆ ಹೋಲಿಸಿಕೊಂಡಿದ್ದಾರೆ. ಜೆಡಿಎಸ್‌ ಸಮಾವೇಶದಲ್ಲಿ ದೇವೇಗೌಡರು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಮೈತ್ರಿಧರ್ಮವನ್ನು ಅವರೂ ಪಾಲಿಸಬೇಕು,” ಎಂದು ಮುಖಂಡರು ಆಕ್ಷೇಪವೆತ್ತಿದರು.

ಮಂಡ್ಯ, ಹಾಸನಕ್ಕೆ ಬಿಗಿಪಟ್ಟು: ಮಂಡ್ಯವನ್ನು ಪಕ್ಷ ಉಳಿಸಿಕೊಳ್ಳಬೇಕು. ಹಾಗೆಯೇ ಹಾಸನದಲ್ಲೂ ಪಕ್ಷದ ಅಭ್ಯರ್ಥಿಗಳೇ ಕಣಕ್ಕಿಳಿಯಬೇಕು ಎಂದು ಸ್ಥಳೀಯ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದರು. ಎರಡೂ ಕ್ಷೇತ್ರವನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಲು ಆಗದು. ಈ ಪೈಕಿ ಒಂದು ಕ್ಷೇತ್ರಕ್ಕೆ ಒತ್ತಡ ತರಬಹುದು ಎಂಬ ನಿಲುವು ತಳೆಯಲಾಯಿತು. ಈ ಸಂಬಂಧ ಪ್ರಯತ್ನ ಮುಂದುವರಿಸಬೇಕು. ಸ್ಥಳೀಯ ಮಟ್ಟದಿಂದ ಒತ್ತಡ ಜಾಸ್ತಿಯಾದರೆ ಹೈಕಮಾಂಡ್‌ ಗಮನಕ್ಕೆ ತರುವುದಕ್ಕೂ ಅನುಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ಅವರೇ ಸೂಚಿಸಿದರು ಎಂದು ಹೇಳಲಾಗಿದೆ.

ಸುಮಲತಾ ಸ್ಪರ್ಧೆ ಪ್ರಸ್ತಾಪ : ಮಂಡ್ಯದಿಂದ ಸುಮಲತಾ ಅಂಬರೀಷ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಅವರಿಗೆ ಕಾಂಗ್ರೆಸ್‌ನಿಂದಲೇ ಟಿಕೆಟ್‌ ನೀಡುವುದು ಉತ್ತಮ. ಈ ವಿಚಾರದಲ್ಲಿ ಜೆಡಿಎಸ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಮಂಡ್ಯದ ಮುಖಂಡರು ಆಗ್ರಹಿಸಿದರು ಎನ್ನಲಾಗಿದೆ.

ಈಗಿನ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ. ನನ್ನನ್ನು ವಿಲನ್‌ ಆಗಿ ಬಿಂಬಿಸುವ ಕೆಲಸ ಆಕಡೆಯಿಂದ (ಜೆಡಿಎಸ್‌) ನಡೆಯುತ್ತಿದೆ. ನಾನು ರಾಹುಲ್‌ ಗಾಂಧಿ ಅವರಿಗೆ ಮಾತುಕೊಟ್ಟಿದ್ದೇನೆ. ಹಾಗಾಗಿ ಲೋಕಸಭೆ ಚುನಾವಣೆವರೆಗೂ ಹೊಂದಿಕೊಂಡು ಹೋಗಿ.
ಸಿದ್ದರಾಮಯ್ಯ, ಮಾಜಿ ಸಿಎಂ

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಯಾಗಿಲ್ಲ. ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಕುಳಿತು ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಗೆಲುವಿನ ಮಾನದಂಡ ಮುಖ್ಯವಾಗಿದೆ.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಸುವಂತೆ ಕೇಳಿಕೊಂಡಿದ್ದೇವೆ. ಎ.ಮಂಜು ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಬಿ.ಶಿವರಾಂ, ಮಾಜಿ ಸಚಿವ

ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಇರಬೇಕು. ಅಂಬರೀಶ್‌ ಕುಟುಂಬದವರಿಗೆ ಟಿಕೆಟ್‌ ನೀಡಬೇಕೆಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ. ಸುಮಲತಾ ಸ್ಪರ್ಧೆಯ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಚಲುವರಾಯಸ್ವಾಮಿ, ಮಾಜಿ ಸಚಿವ

ಕಾಂಗ್ರೆಸ್‌ 28 ಕ್ಷೇತ್ರಕ್ಕೂ ಅರ್ಜಿ ಹಾಕಲಿ: ರೇವಣ್ಣ ಕಾಂಗ್ರೆಸ್‌ನವರು ಬೇಕಿದ್ರೆ 28 ಲೋಕಸಭೆ ಕ್ಷೇತ್ರಕ್ಕೂ ಅರ್ಜಿ ಹಾಕಲಿ, ನಾವೇನು ಹಿಡಿದಿಟ್ಟುಕೊಂಡಿದ್ದೇವಾ ಎಂದು ಸಚಿವ ಎಚ್‌.ಡಿ.ರೇವಣ್ಣ ಪ್ರಶ್ನಿಸಿದ್ದಾರೆ. ”ರಾಹುಲ್‌ ಗಾಂಧಿ, ಸೋನಿಯಾ, ದಿನೇಶ್‌ ಗುಂಡೂರಾವ್‌ ಅವರು ಪಕ್ಷದ ಟಿಕೆಟ್‌ ಬಗ್ಗೆ ತೀರ್ಮಾನಿಸುತ್ತಾರೆ. ಅವರು ನಿಲ್ಲುವುದು ಬೇಡ ಎನ್ನಲು ನಾವ್ಯಾರು? ಚುನಾವಣೆಯಲ್ಲಿ ಸ್ಪರ್ಧಿಸಲಿ. ನಮ್ಮದೇನು ಅಭ್ಯಂತರವಿಲ್ಲ, ನಮಗೆಷ್ಟು ಸೀಟು ಕೊಡುತ್ತಾರೆ, ಅದನ್ನು ನಮ್ಮ ವರಿಷ್ಠರು ಕುಳಿತು ಚರ್ಚಿಸುತ್ತಾರೆ,” ಎಂದು ತಿಳಿಸಿದರು.

ಪ್ರಜ್ವಲ್‌ ಅಂದ್ರೆ ಪಪ್ಪು: ರಾಹುಲ್‌ ಗಾಂಧಿ ಹೇಗೆ ರಾಷ್ಟ್ರಮಟ್ಟದಲ್ಲಿ ಪಪ್ಪು ಆಗಿದ್ದಾರೋ, ರಾಜ್ಯ ಜೆಡಿಎಸ್‌ನಲ್ಲಿ ಪ್ರಜ್ವಲ್‌ ಸಹ ‘ಪಪ್ಪು’ ಎಂದು ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಗೇಲಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು ”ಇನ್ನು ಮುಂದೆ ಪ್ರಜ್ವಲ್‌ ರೇವಣ್ಣ ‘ಪಿ’ ಫಾರ್‌ ಪಪ್ಪು ಆಗಿದ್ದಾರೆ. ಇವರು ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು,” ಎಂದು ತಮ್ಮ ವಿರುದ್ಧದ ಆರೋಪದ ಬಗ್ಗೆ ತಿರುಗೇಟು ನೀಡಿದರು.

About the author

ಕನ್ನಡ ಟುಡೆ

Leave a Comment