ರಾಜ್ಯ ಸುದ್ದಿ

ಹಿಂಗಾರೂ ವಿಫಲ, ರಾಜ್ಯದಲ್ಲಿ ಮತ್ತಷ್ಟು ಬರ: ದೇಶಪಾಂಡೆ

ಬೆಳಗಾವಿ: ಬರದ ಸಮರ್ಥ ನಿರ್ವಹಣೆಗೆ ನಾಲ್ಕು ಸಂಪುಟ ಉಪಸಮಿತಿಗಳನ್ನು ರಚನೆ ಮಾಡಿ, ಯುದ್ಧೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ಗಳ ಬರದ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಬರವನ್ನು ಸರಕಾರವೊಂದೇ ಅಲ್ಲ. ಎಲ್ಲರೂ ಪಕ್ಷಾತೀತವಾಗಿ ಎದುರಿಸಬೇಕು. ಜಿಲ್ಲಾ ಮಟ್ಟದಲ್ಲಿನ ಟಾಸ್ಕ್‌ಪೋರ್ಸ್‌ ಸಮಿತಿಗೆ ವಿಧಾನಪರಿಷತ್‌ ಸದಸ್ಯರನ್ನು ಸೇರಿಸಿಕೊಳ್ಳುವ ವಿಷಯವನ್ನು ಪರಿಶೀಲಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ 2017-18ರಲ್ಲಿ ತೆಂಗು ಬೆಳೆ ಹಾನಿಗೆ ಕೇಂದ್ರದಿಂದ ಪರಿಹಾರ ಬಂದಿಲ್ಲ. ಆದರೆ ಮುಖ್ಯಮಂತ್ರಿಗಳ ಮುಂಗಡ ಪತ್ರದಂತೆ 44 ಲಕ್ಷ ತೆಂಗಿನ ಮರಗಳಿಗೆ 180 ಕೋಟಿ ರೂ.ಗಳ ಪರಿಹಾರ ಬಿಡುಗಡೆ ಮಾಡಲಾಗಿದೆ. ಮರವೊಂದಕ್ಕೆ 400 ರೂ.ಗಳನ್ನು ನೀಡಲಾಗುತ್ತದೆ. ನೀರು, ಮೇವು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಯುದ್ದೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.

ಬರವೋ, ಸಂಪುಟವೋ ? ಬರದ ಚರ್ಚೆ ನಡೆಸುವಾಗ ಸಚಿವ ಸಂಪುಟ ಇದೆ. ಬೇಗ ಮುಗಿಸಬೇಕೆಂದು ಸಚಿವೆ ಜಯಮಾಲ ಹೇಳುತ್ತಿರುವುದು ಎಷ್ಟು ಸರಿ? – ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ


ನಿಮಗಿಂತ ನನ್ನ ಕೂದಲು ಹಣ್ಣಾಗಿವೆ! ಪ್ರತಿಪಕ್ಷ ಬಿಜೆಪಿ ಸದಸ್ಯರು ಬರಗಾಲದ ವಿಚಾರದಲ್ಲಿ ಆಡಳಿತ ಪಕ್ಷವನ್ನು ಟೀಕಿಸುತ್ತಾ ಕಾಲೆಳೆಯಲು ಮುಂದಾದಾಗ, ಕೋಪಗೊಂಡ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು, ಕೋಟ ಶ್ರೀನಿವಾಸ ಪೂಜಾರಿ ಉದ್ದೇಶಿಸಿ, ನಿಮ್ಮ ಕೂದಲು ಹಣ್ಣಾಗಿಲ್ಲ. ಆದರೆ ನನ್ನ ಕೂದಲೆಲ್ಲಾ ಹಣ್ಣಾಗಿವೆ ಎಂದು ತಮ್ಮ ತಲೆಯನ್ನು ಸವರಿಕೊಂಡರು.

About the author

ಕನ್ನಡ ಟುಡೆ

Leave a Comment