ರಾಷ್ಟ್ರ

ಹುತಾತ್ಮ ಯೋಧ ಚಂದ್ರಗೆ ಜನಪ್ರತಿನಿಧಿಗಳಿಂದ ಅಗೌವರ ಗ್ರಾಮಸ್ಥರ ಪ್ರತಿಭಟನೆ

ಹಾಸನ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧ ಹೆಚ್.ಎಸ್.ಚಂದ್ರ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ವೇಳೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗೌರವ ಸಲ್ಲಿಸಿದ್ದಾರೆಂದು ಆರೋಪ ಮಾಡಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಹಾಗೂ ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಯೋಧನ ಪಾರ್ಥಿವ ಶರೀರಕ್ಕೆ ಅಗೌರವ ಸೂಚಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಯೋಧನ ಅಂತಿಮ ಯಾತ್ರೆ ವೇಳೆ ಹೆಚ್ಐಎಂಎಸ್ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಹುತಾತ್ಮ ಯೋಧ ಚಂದ್ರ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇಡುವ ಬದಲು ಅಧಿಕಾರಿಗಳು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಜಿಲ್ಲಾ ಆಡಳಿತ ಮಂಡಳಿ ವಿರುದ್ಧ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಅಲ್ಲದೆ, ಅಧಿಕಾರಿಗಳ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಲು ಆರಂಭಿಸಿದ್ದರು. ಆಡಳಿತ ಮಂಡಳಿ ಹುತಾತ್ಮ ಯೋಧನನ್ನು ಸಾಮಾನ್ಯ ಮನುಷ್ಯರಂತೆ ನೋಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ ಮಂಡಳಿಯೂ ಸಾರ್ವಜನಿಕ ದರ್ಶನಕ್ಕೆ ಕೂಡಲೇ ವ್ಯವಸ್ಥೆಯನ್ನು ಕಲ್ಪಿಸಿದರು. ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಯೋಧನ ಅಂತಿಮ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿದರು. ಬಳಿಕ ಸಚಿವ ಮಂಜು ಹಾಗೂ ರೋಹಿಣಿ ಸಿಂಧೂರಿಯವರು ಯೋಧನಿಗೆ ಅಂತಿಮ ಗೌರವಗಳನ್ನು ಸಲ್ಲಿಸಿದರು.

 

About the author

ಕನ್ನಡ ಟುಡೆ

Leave a Comment