ರಾಜಕೀಯ ರಾಷ್ಟ್ರ ಸುದ್ದಿ

ಹೆಚ್.ಎಸ್ ಮಹದೇವ್ ಪ್ರಸಾದ್ ಹೃದಯಘಾತದಿಂದ ವಿಧಿವಶ

ಚಿಕ್ಕಮಗಳೂರು,ಜ.೩: ಸಕ್ಕರೆ ಹಾಗೂ ಸಹಕಾರ ಸಚಿವ ಹೆಚ್.ಎಸ್ ಮಹದೇವ್ ಪ್ರಸಾದ್ (58) ಹೃದಯಘಾತದಿಂದ ಇಂದು ಚಿಕ್ಕಮಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದ ಸೆರಾಯ್ ರೆಸಾರ್ಟ್ ನಲ್ಲಿ ಸಚಿವ ಹೆಚ್ ಎಸ್ ಮಹದೇವ್ ಪ್ರಸಾದ್ ನಿಧನರಾಗಿದ್ದಾರೆ. ಸಹಕಾರ ಸಾರಿಗೆ ಸಂಸ್ಥೇಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ನಿನ್ನೆ ರಾತ್ರಿ ಆಗಮಿಸಿದ್ದರು. ಇಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು.

ಆದರೆ ಇಂದು ರೆಸಾರ್ಟ್ ನಲ್ಲಿ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಹೆಚ್. ಎಸ್ ಮಹದೇವ್ ಪ್ರಸಾದ್ ಗುಂಡ್ಲುಪೇಟೆ ಶಾಸಕರಾಗಿದ್ದರು.

ಅಗಸ್ಟ್ 5 1958ರಲ್ಲಿ ಜನಿಸಿದ್ದ ಹೆಚ್.ಎಸ್ ಮಹದೇವ್ ಪ್ರಸಾದ್ ಗುಂಡ್ಲುಪೇಟೆಯಿಂದ 5 ಬಾರಿ ಶಾಸಕರಾಗಿದ್ದರು. ಅಲ್ಲದೆ ಆಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಪಾರ್ಥಿವ ಶರೀರವನ್ನ ಚಿಕ್ಕಮಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ತರಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಕೊಪ್ಪದ ಸೆರಾಯ್ ರೆಸಾರ್ಟ್ ನಲ್ಲಿ ಪಾರ್ಥೀವ ಶರೀರವಿದ್ದು, ರೆಸಾರ್ಟ್ ಸುತ್ತ ಪೊಲೀಸ್ ಭದ್ರತೆ ವಹಿಸಲಾಗಿದೆ. ಈ ನಡುವೆ ಹೆಲಿಕಾಪ್ಟರ್ ಮೂಲಕ ಮೈಸೂರಿನ ಮನೆಗೆ ಮಹದೇವ್ ಪ್ರಸಾದ್ ಅವರ ಪಾರ್ಥೀವ ಶರೀರ ತರಲಿದ್ದು, ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ತೆರಳುವ ಬದಲು ಮೈಸೂರಿಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment