ರಾಷ್ಟ್ರ ಸುದ್ದಿ

ಹೈದರಾಬಾದ್: ಕಾಂಗ್ರೆಸ್ ವಂಶಾಡಳಿತ ರಾಜಕೀಯದ ವಿರುದ್ಧ ನಿತಿನ್ ಗಡ್ಕರಿ ವಾಗ್ದಾಳಿ

ಹೈದರಾಬಾದ್: ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ನಡೆಸಿದ್ದ ವಂಶಾಡಳಿತ ರಾಜಕೀಯದ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. ಹೈದರಾಬಾದ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ಬಡ ಜನರನ್ನು ಹೊಂದಿರುವ ನಮ್ಮದು ಶ್ರೀಮಂತ ರಾಷ್ಟ್ರ. ರಾಷ್ಟ್ರವನ್ನಾಳಿದವರು ತಮ್ಮ ಕುಟುಂಬಕ್ಕಷ್ಟೇ ಲಾಭ ಮಾಡಿಕೊಂಡರು. ಈ ಹಿಂದೆ ಆಡಳಿತ ನಡೆಸಿದ ಸರ್ಕಾರದಲ್ಲಿ ಪ್ರಧಾನಿ, ಪ್ರಧಾನಮಂತ್ರಿಗಳನ್ನು ಹುಟ್ಟುಹಾಕಿದರೆ, ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳನ್ನು ಹುಟ್ಟುಹಾಕುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅವೆಲ್ಲವೂ ಬದಲಾಯಿತು ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕತ್ವವನ್ನು ಕೊಂಡಾಡಿದ ಅವರು, ನಮ್ಮ ಪಕ್ಷ ಎಂದಿಗೂ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಡೆಯಲಿಲ್ಲ. ಬಿಜೆಪಿ ಕೇವಲ ಒಂದು ಕುಟುಂಬದ ಪಕ್ಷವಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷ ನಮ್ಮದಲ್ಲ. ಅಟಲ್ ಬಿಹಾರಿ ವಾಜಪೇಯಿ ಧೀಮಂತ ನಾಯಕ. ಆದರೆ, ಬಿಜೆಪಿ ವಾಜಪೇಯಿ ಹಾಗೂ ಎಲ್.ಕೆ.ಅಡ್ವಾಣಿಯವರಂತಹ ಹೆಸರಿನಿಂದ ಖ್ಯಾತಿ ಪಡೆಯಲಿಲ್ಲ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಂತಹ ನಾಯಕರಿದ್ದಾರೆ. ಆದರೆ, ನಮ್ಮ ಪಕ್ಷ ಇವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ನಮ್ಮ ಪಕ್ಷ ಚಿಂತನೆ ಹಾಗೂ ತತ್ವಗಳೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕೃಷಿ, ಕೈಗಾರಿಕೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು ದೇಶದ ಪ್ರಗತಿಯ ಅಗತ್ಯತೆಗಳಾಗಿವೆ. ಮುಂದಿನ ಡಿಸೆಂಬರ್ ಒಳಗಾಗಿ ಬಿಜೆಪಿ ಸರ್ಕಾರ ದೇಶದ ಪ್ರತೀ ಗ್ರಾಮಕ್ಕೂ ವಿದ್ಯುತ್ ಸೌಲಭ್ಯವನ್ನು ನೀಡಲಿದೆ. ನಮ್ಮ ಸರ್ಕಾರ ಗ್ರಾಮಗಳನ್ನು ಸ್ಮಾರ್ಟ್ ಗ್ರಾಮಗಳನ್ನಾಗಿ ಮಾಡುತ್ತಿದೆ. ಉತ್ತಮ ಆಡಳಿತ ಹಾಗೂ ದೇಶದ ಅಭಿವೃದ್ಧಿಯ ಮಾರ್ತದಲ್ಲಿ ಮೋದಿ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment