ರಾಷ್ಟ್ರ ಸುದ್ದಿ

ಹೊಸದಿಲ್ಲಿ : ಮೋದಿ ಕೇರ್‌ ಫಲಾನುಭವಿಗಳಿಗೆ ಪ್ರಧಾನಿ ನೇರ ಪತ್ರ

ಹೊಸದಿಲ್ಲಿ : ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನ್ನುವ ಹೆಗ್ಗಳಿಕೆ ಪಡೆದಿರುವ ‘ಆಯುಷ್ಮಾನ್‌ ಭಾರತ್‌’ ಬಗ್ಗೆ ಅರ್ಹ ಫಲಾನುಭವಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ಸುಮಾರು ಐದು ಕೋಟಿ ಮಂದಿಗಂತೂ ಈ ಯೋಜನೆಯ ಅರಿವೇ ಇಲ್ಲ. ತಿಳಿವಳಿಕೆಯ ಕೊರತೆ ಯೋಜನೆ ಅನುಷ್ಠಾನದಲ್ಲಿ ದೊಡ್ಡ ಸವಾಲು ಎಂದು ಭಾವಿಸಲಾಗಿದ್ದು, ಅದರ ನಿವಾರಣೆಗೆ ಖುದ್ದು ಪ್ರಧಾನಿಯವರೇ ‘ಪತ್ರ’ದ ಪರಿಹಾರ ಕಂಡುಕೊಂಡಿದ್ದಾರೆ! ಜನರ ಆರೋಗ್ಯ ಸುಧಾರಿಸದೆ ದೇಶದ ಅರ್ಥವ್ಯವಸ್ಥೆ ಸರಿ ಹೋಗದು ಎನ್ನುವುದು ತಜ್ಞರ ಅಭಿಮತ. ಆ ಹಿನ್ನೆಲೆಯಲ್ಲಿ ರೂಪುಗೊಂಡಿದ್ದೇ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ್‌ ಯೋಜನೆ. ಇದರ ಹಿನ್ನೆಡೆಗೆ ಮೂಲ ಕಾರಣಗಳನ್ನು ಗುರುತಿಸಿ ತಳಮಟ್ಟದಲ್ಲಿಯೇ ಚಿಕಿತ್ಸೆ ನೀಡಬೇಕು ಎನ್ನುವುದು ಪ್ರಧಾನಿ ಸಲಹೆ.

ಚಿಕಿತ್ಸೆ ಏನು? ಪ್ರತಿ ಫಲಾನುಭವಿ ಕುಟುಂಬಕ್ಕೂ ಖುದ್ದು ಮಾಹಿತಿ ಒದಗಿಸುವುದು ಪ್ರಧಾನಿ ಕಂಡುಕೊಂಡ ಪರಿಹಾರ. ಮೋದಿ ಕೇರ್‌ ವ್ಯಾಪ್ತಿಗೆ ಬರುವ 10 ಕೋಟಿ ಕುಟುಂಬಗಳಿಗೆ ಪ್ರಧಾನಿ ಪತ್ರ ಬರೆದು ಮಾಹಿತಿ ನೀಡಲಿದ್ದಾರೆ. ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಅವರು ಪತ್ರದಲ್ಲಿ ನೀಡಲಿದ್ದಾರೆ. ಸಾಮಾಜಿಕ-ಆರ್ಥಿಕ ಜಾತಿ ಗಣತಿ ಆಧಾರದ ಮೇಲೆ ದೇಶದ ಶೇ.40ರಷ್ಟು ಮಂದಿ ಈ ಯೋಜನೆಯಡಿ ತಮ್ಮಷ್ಟಕ್ಕೆ ತಾವೇ ನೋಂದಣಿ ಪಡೆದಿದ್ದಾರೆ. ‘ಬಡ ಜನತೆಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಈ ಯೋಜನೆ ದೇಶದ ಚಿತ್ರಣವನ್ನೇ ಬದಲಿಸಲಿದೆ,” ಎನ್ನುವುದು ಯೋಜನೆಯ ಹಿಂದಿನ ರೂವಾರಿಯೂ ಆಗಿರುವ ನೀತಿ ಆಯೋಗದ ಸದಸ್ಯ ವಿನೋದ್‌ ಕೆ. ಪಾಲ್‌ ಅಭಿಮತ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಮತ್ತೊಂದು ಅವಧಿಯ ‘ರಾಜಕೀಯ ಅದೃಷ್ಟ’ಕ್ಕೆ ಇದು ಮುನ್ನುಡಿ ಬರೆಯಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ”ಆರೋಗ್ಯ ಸೇವೆ ದೃಷ್ಟಿಯಿಂದ ಮಾತ್ರವಲ್ಲ, ಉದ್ಯೋಗ ಕ್ಷೇತ್ರದಲ್ಲಿಯೂ ಇದರಿಂದ ಸುಧಾರಣೆ ಸಾಧ್ಯವಾಗಲಿದೆ,” ಎಂದು ಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

ತಿಂಗಳ ವರದಿ: ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೊಂಡು ಒಂದು ತಿಂಗಳು ಉರುಳಿದೆ. ಈ ಅಲ್ಪಾವಧಿಯಲ್ಲಿ ದೇಶಾದ್ಯಂತ 112,000 ಮಂದಿ ಇದರ ಉಪಯೋಗ ಪಡೆದಿದ್ದಾರೆ. 1.4 ಶತಕೋಟಿ ರೂಪಾಯಿ ಖರ್ಚಾಗಿದೆ ಎಂದು ಯೋಜನೆಯ ಅಂಕಿ ಅಂಶಗಳು ತಿಳಿಸಿವೆ. ಜನರ ಆರೋಗ್ಯಕ್ಕೆ ಬೆಲೆ ಕಟ್ಟಲಾಗದು. ದುಡ್ಡಿಗಿಂತ ಅವರ ಆರೋಗ್ಯ ಮುಖ್ಯ ಎನ್ನುವ ಆದರ್ಶವನ್ನು ಪ್ರಧಾನಿ ಮೋದಿ ಪಾಲಿಸುತ್ತಿದ್ದು, ಆಯುಷ್ಮಾನ್‌ ಯೋಜನೆಗಾಗಿ ವಾರ್ಷಿಕ 120 ಶತಕೋಟಿ ರೂ. ಮೀಸಲಿಡಲು ತೀರ್ಮಾನಿಸಿದ್ದಾರೆ. 29 ರಾಜ್ಯಗಳಲ್ಲಿ ಅನುಷ್ಠಾನ ಕಂಡಿರುವ ಈ ಯೋಜನೆ ಎಲ್ಲಿಯೂ ಹಳಿ ತಪ್ಪಬಾರದು ಎನ್ನುವ ಎಚ್ಚರವನ್ನು ಸರಕಾರ ವಹಿಸಿದೆ. ಫಲಾನುಭವಿಗಳ ಚಿಕಿತ್ಸೆಗೆ ತಗಲುವ ಕಂತಿನ ಹಣವನ್ನು ಇನ್ಷೂರೆನ್ಸ್‌ ಕಂಪನಿಗಳ ಬದಲಿಗೆ ಟ್ರಸ್ಟ್‌ಗಳ ಮೂಲಕ ನೀಡಲಾಗುತ್ತಿದೆ. ಇದರಿಂದ ದುರ್ಬಳಕೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಆಯುಷ್ಮಾನ್‌ ಅಂಕಿ ಸಂಖ್ಯೆ : 15,000 : ಈ ಯೋಜನೆ ಜಾರಿಗೆ ನೋಂದಣಿ ಪಡೆದ ಆಸ್ಪತ್ರೆಗಳು. ಇದರಲ್ಲಿ ಅರ್ಧದಷ್ಟು ಖಾಸಗಿ ಆಸ್ಪತ್ರೆಗಳು 49,000 : ನೋಂದಣಿ ಬಯಸಿ ಅರ್ಜಿ ಸಲ್ಲಿಸಿರುವ ಹೆಚ್ಚುವರಿ ಆಸ್ಪತ್ರೆಗಳು.1 ಪರ್ಸೆಂಟ್‌ : 2025ರ ವೇಳೆಗೆ ಆರೋಗ್ಯ ಸೇವೆಗೆ ಖರ್ಚು ಮಾಡಲು ಉದ್ದೇಶಿಸಿರುವ ಜಿಡಿಪಿ ಪ್ರಮಾಣ 112,000 : ಯೋಜನೆಯಡಿ ಚಿಕಿತ್ಸೆ ಪಡೆದವರು 1.4 ಶತಕೋಟಿ ರೂ. : ಇದುವರೆಗೆ ಖರ್ಚಾದ ಮೊತ್ತ

About the author

ಕನ್ನಡ ಟುಡೆ

Leave a Comment