ರಾಜ್ಯ ಸುದ್ದಿ

10 ರೂ. ತೋರಿಸಿ ಲ್ಯಾಪ್‌ಟಾಪ್‌ ಕದ್ದರು

ಬೆಂಗಳೂರು: 10 ರೂ. ನೋಟನ್ನು ಕೆಳಗೆ ಬೀಳಿಸಿ ಟೆಕ್ಕಿಯೊಬ್ಬರ ಲ್ಯಾಪ್‌ಟಾಪ್‌ ಕದ್ದಿರುವ ಘಟನೆ ಜಯನಗರ 9ನೇ ಬ್ಲಾಕ್‌ನಲ್ಲಿ ನಡೆದಿದೆ. ರಾಜೇಶ್‌ ಲ್ಯಾಪ್‌ಟಾಪ್‌ ಕಳೆದುಕೊಂಡವರು. 9ನೇ ಬ್ಲಾಕ್‌ನ ಮಾರ್ಕೆಟ್‌ನಲ್ಲಿರುವ ಹೂವಿನ ಅಂಗಡಿ ಎದುರಿಗೆ ಕಾರು ನಿಲ್ಲಿಸಿ, ಹೂಗುಚ್ಛ ಖರೀದಿಸಿ ವಾಪಸ್‌ ಬಂದು ಕಾರು ಹತ್ತುವ ಪ್ರಯತ್ನದಲ್ಲಿದ್ದಾಗ ಇಬ್ಬರು ದುಷ್ಕರ್ಮಿಗಳು ಇವರ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ್ದಾರೆ.

ಕಾರಿನ ಬಳಿ ಬಂದು ಲಾಕ್‌ ತೆರೆದು ಹೂಗುಚ್ಛವನ್ನು ಕಾರಿನ ಹಿಂಬದಿ ಸೀಟಿನಲ್ಲಿ ಇಟ್ಟರು. ಅದೇ ವೇಳೆಗೆ ಪಕ್ಕಕ್ಕೆ ಬಂದ ಒಬ್ಬಾತ, ‘ಸರ್‌ ನಿಮ್ಮ ಹಣ ಕೆಳಗೆ ಬಿದ್ದಿದೆ’ ಎಂದು ಹೇಳಿದ್ದ. ಕೆಳಗೆ ನೋಡಿದಾಗ 10 ರೂ. ಮುಖಬೆಲೆಯ ನೋಟಿನ ಕಟ್ಟು ಬಿದ್ದಿತ್ತು. ಅದನ್ನು ಎತ್ತಿಕೊಳ್ಳಲು ರಾಜೇಶ್‌ ಕೆಳಗೆ ಬಗ್ಗುತ್ತಿದ್ದಂತೆ ಮತ್ತೊಬ್ಬಾತ ಬಂದು ಮುಂಬದಿ ಸೀಟಿನಲ್ಲಿ ಇಟ್ಟಿದ್ದ ಲ್ಯಾಪ್‌ಟಾಪ್‌ ಎತ್ತಿಕೊಂಡು ಪರಾರಿಯಾಗಿದ್ದಾನೆ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೇ ದುಷ್ಕರ್ಮಿಗಳು ಗಮನ ಬೇರೆಡೆ ಸೆಳೆದು ಲ್ಯಾಪ್‌ಟಾಪ್‌ ಕದ್ದಿದ್ದಾರೆ. ತಕ್ಷಣ ರಾಜೇಶ್‌ ಜಯನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಬ್ಯಾಗ್‌ ಪತ್ತೆ: ದುಷ್ಕರ್ಮಿಗಳು ಕದ್ದಿದ್ದ ಲ್ಯಾಪ್‌ಟಾಪ್‌ನ ಬ್ಯಾಗ್‌ ಜಯನಗರದ ಬಿಗ್‌ ಬಜಾರ್‌ ಬಳಿ ಅದೇ ದಿನ ಪತ್ತೆಯಾಗಿದೆ. ಬ್ಯಾಗ್‌ನೊಳಗಿದ್ದ ಎಟಿಎಂ ಕಾರ್ಡ್‌ಗಳೆಲ್ಲಾ ಅದರಲ್ಲೇ ಇದ್ದವು. ಲ್ಯಾಪ್‌ಟಾಪ್‌ ಮಾತ್ರ ಕಳ್ಳತನವಾಗಿದೆ. ಬಿಗ್‌ ಬಜಾರ್‌ ಸಮೀಪ ಇರುವ ಸಿಸಿಟಿವಿಗಳ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment