ರಾಜ್ಯ ಸುದ್ದಿ

100ರಿಂದ 150ಕ್ಕೆ ಉದ್ಯೋಗ ಖಾತ್ರಿ ಹೆಚ್ಚಳ: ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ಕೋಟಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಬುಧವಾರ ರಾಜ್ಯದ ಎಲ್ಲ ಜಿಪಂಗಳ ಸಿಇಒ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕಳೆದ ವರ್ಷ ನರೇಗಾ ಫಲಾನುಭವಿಗಳಿಗೆ ನೀಡಬೇಕಾದ 943 ಕೋಟಿ ರೂ., ಪ್ರಸಕ್ತ ವರ್ಷದ 250 ಕೋಟಿ ರೂ. ಸೇರಿ ಒಟ್ಟು 1,193 ಕೋಟಿ ರೂ. ಅನ್ನು ಕೇಂದ್ರ ಸರ್ಕಾರ ಈತನಕ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ, ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಲಿದ್ದಾರೆ ಎಂದರು.

ನರೇಗಾ ಯೋಜನೆಯಲ್ಲಿ ಈ ವರ್ಷ ಈಗಾಗಲೇ ಶೇ.62 ಪ್ರಗತಿ ಸಾಧಿಸಲಾಗಿದ್ದು, ಕಳೆದ 60 ದಿನಗಳಲ್ಲೇ 2 ಕೋಟಿ ಮಾನವ ಉದ್ಯೋಗ ಸೃಷ್ಟಿಸಲಾಗಿದೆ. ಬರ ಹಿನ್ನೆಲೆಯಲ್ಲಿ ಕೃಷಿ ಕಾರ್ವಿುಕರು ಗುಳೇ ಹೋಗದೆ ವಾಸಸ್ಥಾನದಲ್ಲೇ ಉದ್ಯೋಗ ಸಿಗುವಂತೆ ಮಾಡಲು ಪ್ರತಿ ಪಂಚಾಯಿತಿಯಲ್ಲಿ ನರೇಗಾ ಉದ್ಯೋಗ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದು ಹೇಳಿದರು.

ನೀರಿಗೆ 2,350 ಕೋಟಿ ವೆಚ್ಚ: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆಗಳಿಗಾಗಿ ಕಳೆದ ವರ್ಷದ ಬಾಕಿ ಉಳಿದ 647 ಕೋಟಿ ರೂ. ಹಾಗೂ ಪ್ರಸಕ್ತ ವರ್ಷದ 1,700 ಕೋಟಿ ರೂ. ಸೇರಿ 2,350 ಕೋಟಿ ರೂ. ವೆಚ್ಚದಲ್ಲಿ 27 ಸಾವಿರ ಕಾಮಗಾರಿಗಳು ನಡೆಯುತ್ತಿವೆ. ಡಿ.31ರೊಳಗೆ ಟೆಂಡರ್ ನಡೆಸಿ ಮಾರ್ಚ್ 31ರೊಳಗೆ ಶೇ.90 ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

About the author

ಕನ್ನಡ ಟುಡೆ

Leave a Comment