ರಾಜಕೀಯ

12 ಸೀಟುಗಳಿಗಾಗಿ ದೊಡ್ಡಗೌಡರ ಪಟ್ಟು: ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕೈ ಸಂಸದರ ಕಸರತ್ತು

ಬೆಂಗಳೂರು: ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕೆಂದು ಮಾಜಿ ಪ್ರಧಾನಿ ಎಚ್,ಡಿ ದೇವೇಗೌಡ ಪಟ್ಟು ಹಿಡಿದಿರುವ ಬೆನ್ನಲ್ಲೇ ಕಾಂಗ್ರೆಸ್ ನ ಹಾಲಿ 10 ಸಂಸದರು ತಮ್ಮ ಕ್ಷೇತ್ರಗಳನ್ನು ತಮಲ್ಲೇ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕ್ಷೇತ್ರಗಳಿಂದ ತಾವೇ ಸ್ಪರ್ಧಿಸಲು ಬಯಸಿರುವ ಹಾಲಿ ಸಂಸದರು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ, ತಮಗೆ ಬೇಕಾದ 12 ಸೀಟುಗಳನ್ನು ಪಡೆಯಲು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿ ಅದನ್ನು ಪಡೆದುಕೊಳ್ಳುತ್ತಾರೆ ಎಂಬ ಭಯದಿಂದಾಗಿ ಸಂಸದರು ದೆಹಲಿ ನಾಯಕರನ್ನು ಭೇಟಿಯಾಗಲು ಮುಂದಾಗಿದ್ದಾರೆ.
ಕಳೆದ ಬಾರಿ ಮೋದಿ ಅಲೆ ವಿರುದ್ಧ ಗೆದ್ದು ಬಂದ ಸಂಸದರು ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ಷೇತ್ರಗಳಲ್ಲಿ ಹೊಂದಾಣಿಕೆ ಬೇಡ ಎಂಬ ಬೇಡಿಕೆ ಇಟ್ಟಿದ್ದರೆ ತಪ್ಪೇನಲ್ಲ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಗೆಲುವೊಂದೇ ಮಾನದಂಡ. ಹಾಗಾಗಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಿದೆ. ಆಯಾ ಜಿಲ್ಲೆಗಳಲ್ಲಿ ಪಕ್ಷ ಗಳಿಗಿರುವ ವರ್ಚಸ್ಸಿಗೆ ಅನುಸಾರ ಸೀಟು ಹಂಚಿಕೆ ನಡೆಯಲಿದೆ ಎಂದು ಹೇಳಿದ್ದಾರೆ.
ದೇವೇಗೌಡರು 12 ಸೀಟುಗಳಿಗಾಗಿ ಪಟ್ಟು ಹಿಡಿದಿರುವುದರಿಂದ ಈಗ ಹಾಲಿ ಕಾಂಗ್ರೆಸ್ ಶಾಸಕರಿರುವ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕ್ಷೇತ್ರಗಳು ಜೆಡಿಎಸ್ ಪಾಲಾಗುವ ಸಾಧ್ಯತೆಯಿದೆ, ಸಂಸದರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ, ಇದನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ ,ಸೀಟು ಹಂಚಿಕೆ ಅಥವಾ  ಹಾಲಿ ಸಂಸದರ ಬದಲಾವಣೆ ಸಂಬಂಧ ಯಾವುದೇ ಚರ್ಚೆಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment