ರಾಷ್ಟ್ರ

16 ಗಂಟೆ ಲಾಲು ರೈಲುಯಾನ: ಆರ್‌ಜೆಡಿ ಆಕ್ಷೇಪ

ಹೊಸದಿಲ್ಲಿ:  ಮೇವು ಹಗರಣದಲ್ಲಿ ಅಪರಾಧಿಯಾಗಿ ಕಳೆದ ವರ್ಷ ಡಿಸೆಂಬರ್‌ನಿಂದ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿರುವುದು ಗೊತ್ತಿರುವ ವಿಚಾರ.

ಕಿಡ್ನಿ ತೊಂದರೆ ಸೇರಿ ನಾನಾ ಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 69 ವರ್ಷದ ಲಾಲು ವಿಮಾನದಲ್ಲಿ ದಿಲ್ಲಿಗೆ ಹೋಗಲು ವೆಚ್ಚ ಪಾವತಿಸಲು ಜಾರ್ಖಂಡ್‌ನ ಬಿಜೆಪಿ ಸರಕಾರ ನಿರಾಕರಿಸಿದ್ದರಿಂದ ವಿಧಿಯಲ್ಲದೇ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ 16 ಗಂಟೆ ಪಯಣಿಸಿದ ಘಟನೆಗೆ ಆರ್‌ಜೆಡಿ ಕಿಡಿಕಾರಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಅವರನ್ನು ಹೀಗೆ ನಡೆಸಿಕೊಂಡಿದ್ದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದೊಂದು ಅಪ್ರಬುದ್ಧ ಹಾಗೂ ಅಮಾನವೀಯ ನಿರ್ಧಾರ ಎಂದು ಆರ್‌ಜೆಡಿ ಹೇಳಿದೆ. ಜಾರ್ಖಂಡ್‌ ಸಧಿಚಿವ ಸರಯೂ ರಾಯ್‌ ಸಹ ಲಾಲು ಬಗ್ಗೆ ಇದೇ ಧ್ವನಿಯಲ್ಲಿ ಮಾತನಾಡಿದ್ದು ಸ್ವತಃ ಬಿಜೆಪಿಗೆ ಇರುಸುಮುರುಸು ತಂದಿದೆ.

ಬಿಜೆಪಿಗೆ ಅಧಿಕಾರದ ಅಹಂಕಾರ ಹೀಗೆ ಮಾಡಿಸುತ್ತಿದೆ ಎಂದು ಕಿಡಿಕಾರಿರುವ ಆರ್‌ಜೆಡಿ ನಾಯಕ ಶಿವಾನಂದ ತಿವಾರಿ ಅವರು ಎಲ್‌.ಕೆ.ಆಡ್ವಾಣಿ ಬಂಧನ ಉಲ್ಲೇಖಿಸಿ ಹರಿಹಾಯ್ದಿದಿದ್ದಾರೆ.

ಅಯೋಧ್ಯೆ ಗಲಾಟೆಗೆ ಸಂಬಂಧಿಸಿದಂತೆ 1990ರಲ್ಲಿ ಎಲ್‌.ಕೆ. ಆಡ್ವಾಣಿ ಅವರ ಬಂಧನವಾಗಿದ್ದ ಸಂದರ್ಭದಲ್ಲಿ ಬಿಹಾರ ಸಿಎಂ ಆಗಿದ್ದ ಲಾಲು ಅವರ ಅಂದಿನ ಸರಕಾರ ಆಡ್ವಾಣಿಯವರನ್ನು ಹೆಲಿಕಾಪ್ಟರ್‌ನಲ್ಲಿ ಧುಮ್ಕಾಗೆ (ಈಗ ಜಾರ್ಖಂಡ್‌ನಲ್ಲಿದೆ) ಕಳುಹಿಸಿಕೊಟ್ಟಿತ್ತು. ಅಲ್ಲದೇ ಆಡ್ವಾಣಿ ಕುಟುಂಬದವರಿಗೂ ಸರಕಾರದ ಖರ್ಚಿನಲ್ಲಿಯೇ ಕಾಪ್ಟರ್‌ನಲ್ಲಿ ಧುಮ್ಕಾಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿತ್ತು. ಇದೆಲ್ಲವನ್ನೂ ಈಗ ಬಿಜೆಪಿ ಮರೆತಿದೆ. ಅಧಿಕಾರ ಹೀಗೆಲ್ಲ ಮಾಡಿಸುತ್ತಿದೆ ಎಂದು ತಿವಾರಿ ಹೇಳಿದ್ದಾರೆ. ಅಯೋಧ್ಯೆ ಗಲಾಟೆಯಲ್ಲಿ ಆಡ್ವಾಣಿ ಆರೋಪಿಯಷ್ಟೇ ಆಗಿದ್ದರು. ಆದರೆ ಇಲ್ಲಿ ಮೇವು ಹಗರಣದಲ್ಲಿ ಲಾಲು ಅಪರಾಧಿ. ಹೀಗಾಗಿ ಇವರೆಡೂ ಭಿನ್ನ ಪ್ರಕರಣಗಳು ಎಂಬ ಸಮಜಾಯಿಷಿ ಮಾತುಗಳೂ ಬಿಜೆಪಿ ವಲಯದಿಂದ ಕೇಳಿಬಂದಿವೆ.

About the author

ಕನ್ನಡ ಟುಡೆ

Leave a Comment