ರಾಷ್ಟ್ರ ಸುದ್ದಿ

16 ವರ್ಷದ ಸೆರೆವಾಸದ ನಂತರ ಭಗವದ್ಗೀತೆಯನ್ನು ತವರಿಗೆ ಕೊಂಡೊಯ್ದ ಪಾಕಿಸ್ತಾನಿ ಪ್ರಜೆ

ವಾರಾಣಸಿ: ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಪ್ರಕರಣದಲ್ಲಿ ವಾರಾಣಸಿ ಕೇಂದ್ರ ಕಾರಾಗೃಹ ಸೇರಿ ಬಿಡುಗಡೆಯಾಗಿರುವ ಪಾಕಿಸ್ತಾನಿ ಪ್ರಜೆ ತನ್ನ ತವರಿಗೆ ಭಗವದ್ಗೀತೆಯನ್ನು ಕೊಂಡೊಯ್ದಿದ್ದಾನೆ. ಹೌದು, ಅಚ್ಚರಿಯಾದರೂ ಇದು ಸತ್ಯ! ವಾರಾಣಸಿ ಕಂಟೋನ್​ಮೆಂಟ್​ ಪ್ರದೇಶದಲ್ಲಿ 16 ವರ್ಷಗಳ ಹಿಂದೆ ಬಂಧಿತನಾಗಿದ್ದ ಜಲಾಲುದ್ದೀನ್​ ಪಾಕಿಸ್ತಾನದ ಸಿಂಧ್​ ಮೂಲದವರು. ಏರ್​ಫೋರ್ಸ್​ ಕಚೇರಿ ಬಳಿ ಕೆಲ ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದಕ್ಕೆ ಆತನನ್ನು ಬಂಧಿಸಿ, ಕಂಟೋನ್​ಮೆಂಟ್​ ಪ್ರದೇಶ ಮತ್ತು ಇತರ ಪ್ರಮುಖ ಸ್ಥಳಗಳ ನಕ್ಷೆಯನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 2001ರಲ್ಲಿ ಜಲಾಲುದ್ದೀನ್​ಗೆ 16 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಸದ್ಯ ತನ್ನ ಜೈಲುಶಿಕ್ಷೆ ಪೂರ್ಣಗೊಳಿಸಿ ತವರಿಗೆ ಮರಳುತ್ತಿರುವ ಜಲಾಲುದ್ದೀನ್​ ತವರಿಗೆ ಮರಳುವಾಗ ಹಿಂದು ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ತನ್ನೊಂದಿಗೆ ಕೊಂಡೊಯ್ದಿರುವುದನ್ನು ಹಿರಿಯ ಪೊಲೀಸ್​ ಅಧಿಕಾರಿ ಅಂಬರೀಶ್​ ಗೌಡ್​ ತಿಳಿಸಿದ್ದಾರೆ.

ಜಲಾಲುದ್ದೀನ್​ ಸೆರೆವಾಸ ಹೀಗಿತ್ತು…  ಜಲಾಲುದ್ದೀನ್​ನನ್ನು ಬಂಧಿಸಿದ್ದಾಗ ಆತ ಕೇವಲ ಪ್ರೌಢ ಶಿಕ್ಷಣದ ವಿದ್ಯಾಭ್ಯಾಸ ಮಾತ್ರ ಮುಗಿಸಿದ್ದ. ಆದರೆ, ಸೆರೆವಾಸದಲ್ಲಿದ್ದಾಗ 10ನೇ ತರಗತಿ ತೇರ್ಗಡೆಯಾಗಿ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆಯುವವರೆಗೂ ವಿದ್ಯಾಭ್ಯಾಸ ಪಡೆದ. ಇಷ್ಟೇ ಅಲ್ಲದೆ, ಜೈಲಿನಲ್ಲಿ ಎಲೆಕ್ಟ್ರಿಶಿಯನ್​ ಕೋರ್ಸ್​ ಅನ್ನು ಪಡೆದುಕೊಂಡಿದ್ದಾನೆ. ಕಳೆದ ಮೂರು ವರ್ಷಗಳಿಂದ ಜೈಲಿನ ಕ್ರಿಕೆಟ್​ ಪಂದ್ಯಾವಳಿಗಳಲ್ಲಿ ಜಲಾಲುದ್ದೀನ್​ ಅಂಪೈರ್​ ಆಗಿದ್ದನು ಎಂದು ತಿಳಿಸಿದರು. ವಿಶೇಷ ತಂಡ ಜಲಾಲುದ್ದೀನ್​ನನ್ನು ಅಮೃತಸರಕ್ಕೆ ಕರೆದುಕೊಂಡು ಹೋಗಿದ್ದು, ವಾಘಾ ಗಡಿಯಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಆತನನ್ನು ಒಪ್ಪಿಸಲಾಗುವುದು. ಅಲ್ಲಿಂದ ಆತ ಪಾಕಿಸ್ತಾನಕ್ಕೆ ಮರಳುತ್ತಾನೆ ಎಂದರು.

About the author

ಕನ್ನಡ ಟುಡೆ

Leave a Comment