ಅ೦ತರಾಷ್ಟ್ರೀಯ

189 ಪ್ರಯಾಣಿಕರಿದ್ದ ಜಕಾರ್ತ ಲಯನ್ ಏರ್’ಲೈನ್ಸ್ ವಿಮಾನ ಸಮುದ್ರದಲ್ಲಿ ಪತನ

ಜಕಾರ್ತ: 189 ಮಂದಿ ಪ್ರಯಾಣಿಕರಿದ್ದ ಇಂಡೋನೇಷ್ಯಾ ಲಯನ್ ಏರ್’ಲೈನ್ಸ್ ಪ್ರಯಾಣಿಕ ವಿಮಾನ ಸಮುದ್ರದಲ್ಲಿ ಪತನಗೊಂಡಿರುವ ಘಟನೆ ಸೋಮವಾರ ನಡೆದಿದೆ. ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಪಾಂಗ್ ಕಲ್ ಪಿನಾಗ್ ದ್ವೀಪಕ್ಕೆ ವಿಮಾನ ಇಂದು ಬೆಳಿಗ್ಗೆ ಹೊರಟಿತ್ತು. ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ವಿಮಾನ ನಾಪತ್ತೆಯಾಗಿರುವುದಾಗಿ ಹೇಳಿದ್ದರು. 7.30ರ ವೇಳೆ ದ್ವೀಪದಲ್ಲಿ ವಿಮಾನ ಇಳಿಯಬೇಕಿತ್ತು.
ಆದರೆ, ವಿಮಾನ ಜಾವಾ ಸಮುದ್ರದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 210 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ವಿಮಾನ ಹೊಂದಿತ್ತು. ದುರಂತದ ವೇಳೆ ವಿಮಾನದಲ್ಲಿ 189 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ದುರಂತದಲ್ಲಿ ಬದುಕುಳಿದಿರಬಹುದಾದ ಪ್ರಯಾಣಿಕರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸುಮಾತ್ರ ದ್ವೀಪದಿಂದ ದೂರ ತೀರದಲ್ಲಿರುವ ಪ್ಯಾಂಕಾಲ್ ಪಿನಾಂಗ್ ನಗರಕ್ಕೆ ಜಕಾರ್ತದಿಂದ ಹೊರಟಿದ್ದ ವಿಮಾನವು ಸಮುದ್ರದಲ್ಲಿ ಪತನಗೊಂಡ ವಿದ್ಯಾಮಾನವನ್ನು ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ.
ಸಮುದ್ರದ ಬಳಿಯಿರುವ ತೈಲ ಸಂಸ್ಕರಣಾ ಘಟಕದ ಅಸುಪಾಸಿನಲ್ಲಿ ವಿಮಾನದ ಆಸನಗಳ ಸಹಿತ ವಿವಿಧ ಬಗೆಯ ಅವಶೇಷಗಳು ತೇಲುತ್ತಿರುವುದು ಕಂಡು ಬಂದಿದೆ ಎಂದು ವರದಿಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment