ರಾಜ್ಯ ಸುದ್ದಿ

ಕಬ್ಬು ಬಾಕಿ ಪಾವತಿಗೆ 15 ದಿನಗಳ ಗಡುವು: ರಾಜ್ಯ ಸರಕಾರ

ಬೆಂಗಳೂರು : ಕಬ್ಬು ಬೆಳೆಗಾರರ ಜತೆಗಿನ ಪರಸ್ಪರ ಒಪ್ಪಂದದಂತೆ 15 ದಿನದೊಳಗೆ ಬಾಕಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ರಾಜ್ಯ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಆದರೂ ಬಾಕಿ ಹಣ ಪಾವತಿ ಸೇರಿದಂತೆ ಬೆಳೆಗಾರರು ಹಾಗೂ ಮಾಲೀಕರ ನಡುವಿನ ಕೆಲವೊಂದು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸ್ಪಷ್ಟತೆ ಮೂಡಿಲ್ಲ; ಯಾವುದೇ ತೀರ್ಮಾನವೂ ಆಗಿಲ್ಲ. ಹೀಗಾಗಿ ಸರಕಾರದ ಈ ಸೂಚನೆಯನ್ನು ಮಾಲೀಕರು ಪಾಲಿಸುವರೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಸಿಎಂ ಕುಮಾರಸ್ವಾಮಿ ಅವರು ಬಳ್ಳಾರಿ ಪ್ರವಾಸ ರದ್ದುಗೊಳಿಸಿ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸುಮಾರು ಐದು ತಾಸು ಚರ್ಚೆ ನಡೆಸಿದರು. ”ರೈತರೊಂದಿಗೆ ವಿಶ್ವಾಸದ ಮೇಲೆ ಮಾಡಿಕೊಂಡ ಒಪ್ಪಂದದಂತೆ ಬಾಕಿ ಪಾವತಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು,” ಎಂದು ಮಾಲೀಕರಿಗೆ ಸಿಎಂ ನಿರ್ದೇಶನ ನೀಡಿದರು.

ಕಾರ್ಖಾನೆಗಳ ಮಾಲೀಕರಾಗಿರುವ ರಾಜಕೀಯ ನಾಯಕರು ಒಳಗೊಂಡು ಬಹುತೇಕ ಎಲ್ಲ ಪ್ರಮುಖ ಕಾರ್ಖಾನೆಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು. ಬಾಕಿ ಪಾವತಿ ವಿಚಾರದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಕಿ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಮಾಲೀಕರು ಸಿಎಂಗೆ ಆಶ್ವಾಸನೆ ನೀಡಿದರು, ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ನಿರ್ದೇಶಕ ಎಂ.ಎನ್‌.ಅಜಯ್‌ ನಾಗಭೂಷಣ್‌ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಸಿಎಂ ತಾಕೀತು : ವ್ಯವಹಾರದಲ್ಲಿ ಏರುಪೇರು ಸರಿಪಡಿಸಿಕೊಳ್ಳುವ ಸಾಮರ್ಥ್ಯ ಕಾರ್ಖಾನೆಗಳ ಮಾಲೀಕರಿಗೆ ಇರುತ್ತದೆ. ಆದರೆ, ರೈತರಿಗೆ ಸೂಕ್ತ ಬೆಲೆ ಸಿಗದಿದ್ದರೆ ಸುಧಾರಿಸಿಕೊಳ್ಳುವುದು ಕಷ್ಟ. ರೈತರ ಹಿತರಕ್ಷಣೆ ಮಾಡುವುದು ಸರಕಾರದ ಕರ್ತವ್ಯ. ಹೀಗಾಗಿ ರೈತರೊಂದಿಗೆ ವಿಶ್ವಾಸದ ಮೇಲೆ ಮಾಡಿಕೊಂಡಿರುವ ಒಪ್ಪಂದದಂತೆ ನಡೆದುಕೊಳ್ಳುವುದು ನಿಮ್ಮ (ಮಾಲೀಕರು) ಜವಾಬ್ದಾರಿ. ರೈತರಿಗೆ ಕೊಟ್ಟ ಮಾತಿನಂತೆ ಬಾಕಿ ಹಣ ಪಾವತಿಸಿ,” ಎಂದು ಕಾರ್ಖಾನೆ ಮಾಲೀಕರಿಗೆ ಸಿಎಂ ತಾಕೀತು ಮಾಡಿದರು. ಬಾಗಲಕೋಟ ಜಿಲ್ಲೆಯಲ್ಲಿ ಕಬ್ಬಿಗೆ ಸಾರಿಗೆ ಮತ್ತು ಕಟಾವು ವೆಚ್ಚ 650 ರೂಪಾಯಿ ಕಡಿತಗೊಳಿಸಿ ಪ್ರತಿ ಟನ್‌ ಗೆ 2,250 ರೂ. ದರವನ್ನು ರೈತರಿಗೆ ಪಾವತಿಸುವುದಾಗಿ ಮಾಲೀಕರು ಸಭೆಗೆ ಭರವಸೆ ನೀಡಿದರು. ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚುವರಿ ಮೊತ್ತ ಪಾವತಿಸಿದ್ದು, ಸಣ್ಣಪುಟ್ಟ ಬಾಕಿ ಪಾವತಿಸುವುದಾಗಿ ಮಾಲೀಕರು ತಿಳಿಸಿದರು. ನಿಮ್ಮಿಂದ ಸೃಷ್ಟಿಯಾಗಿರುವ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ, ರೈತರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಲು ಸಿಎಂ ನಿರ್ದೇಶನ ನೀಡಿದರು,” ಎಂದು ಅಜಯ್‌ ನಾಗಭೂಷನ್‌ ವಿವರಿಸಿದರು.

ಈ ವರ್ಷ ಗೊಂದಲ ಬೇಡ : ‘ಪ್ರಸಕ್ತ ಹಂಗಾಮಿಗೆ ಪ್ರತಿ ಟನ್‌ಗೆ 2,750 ರೂ. ನ್ಯಾಯೋಚಿತ ಬೆಲೆ (ಎಫ್‌ಆರ್‌ಪಿ) ನಿಗದಿಯಾಗಿದೆ. ಗೊಂದಲಕ್ಕೆ ಆಸ್ಪದವಾಗದಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಕಡ್ಡಾಯವಾಗಿ ಎಫ್‌ಆರ್‌ಪಿ ದರ ಪಾವತಿಸಬೇಕು. ಈ ಸಂಬಂಧ ಸರ್ಕಾರದ ಮಾರ್ಗಸೂಚಿಗಳಂತೆ ಪ್ರತಿ ರೈತನೊಂದಿಗೆ ಕಡ್ಡಾಯವಾಗಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು. ನಂತರ ಕಬ್ಬು ನಿಯಂತ್ರಣ ಮಂಡಳಿಯ ನಿರ್ಣಯಗಳಂತೆ ಆದಾಯ ಹಂಚಿಕೆ ಸೂತ್ರ ಜಾರಿಗೊಳಿಸಬೇಕು. ರೈತರಿಗೆ ತೂಕ ಹಾಗೂ ಇಳುವರಿ ಪ್ರಮಾಣ ನಿಗದಿಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಹೊರಡಿಸುವ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,’ ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಾಲೀಕರ ಅಹವಾಲುಗಳೇನು? ಸಭೆಯಲ್ಲಿ ಕಾರ್ಖಾನೆಗಳ ಮಾಲೀಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿಎಂಗೆ ವಿವರಣೆ ನೀಡಿದರು. ದೇಶದಲ್ಲಿ ಪ್ರಸ್ತುತ 230 ಲಕ್ಷ ಟನ್‌ ಸಕ್ಕರೆ ದಾಸ್ತಾನು ಇದೆ. 2017-18ನೇ ಸಾಲಿನಲ್ಲಿ ಸಕ್ಕರೆ ದರ ಏಕಾಏಕಿ ಕುಸಿತ ಇತ್ಯಾದಿ ಕಾರಣಗಳಿಂದ ಕಾರ್ಖಾನೆ ನಡೆಸುವುದು ಕಷ್ಟವಾಗಿದೆ ಎಂದು ವಿವರಿಸಿದರು. ಕಾರ್ಖಾನೆಗಳು ನಷ್ಟ ಅನುಭವಿಸಿದ ಸಂದರ್ಭದಲ್ಲಿ ಎಫ್‌ಆರ್‌ಪಿ ಪಾವತಿಸಲು ಸಾಧ್ಯವಾಗುವಂತೆ ಸಕ್ಕರೆ ಸ್ಥಿರತೆಯ ನಿಧಿ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಬೇಡಿಕೆಯಂತೆ ರಾಜ್ಯ ಸರಕಾರವೂ ಕೇಂದ್ರದ ಮೇಲೆ ಒತ್ತಡ ತರಬೇಕು,” ಎಂದು ಮನವಿ ಮಾಡಿದರು. ಕಾರ್ಖಾನೆಗಳು ಒಂದೊಂದು ರೀತಿ ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ನಾವೇ ರೈತರ ಜೊತೆ ಮಾತಾಡುತ್ತೇವೆ ನಮ್ಮಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ರೈತರ ಜೊತೆ ನಾವೇ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದ ಮಾಲೀಕರು ಸಭೆಗೆ ಭರವಸೆ ನೀಡಿದರು.

ಸಭೆಯಲ್ಲಿ ಯಾರಿದ್ದರು? ಡಿಸಿಎಂ ಜಿ. ಪರಮೇಶ್ವರ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ, ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಮಾಜಿ ಸಚಿವರು ಹಾಗೂ ಕಾರ್ಖಾನೆಗಳ ಮಾಲೀಕರಾದ ಎಸ್‌.ಆರ್‌.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ, ಬಾಲಚಂದ್ರ ಜಾರಕಿಹೊಳಿ ಒಳಗೊಂಡು ಒಟ್ಟು 31 ಸಕ್ಕರೆ ಕಾರ್ಖಾನೆಗಳ ಮಾಲೀಕರು, ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆ ಮಾಲೀಕರ ಒಕ್ಕೂಟದ ಅಧ್ಯಕ್ಷ ರು ಸಭೆಯಲ್ಲಿ ಭಾಗವಹಿಸಿದ್ದರು. ಸಕ್ಕರೆ ಸಚಿವ ಕೆ.ಜೆ. ಜಾರ್ಜ್ ಇರಲಿಲ್ಲ.

ಬಾಕಿ ಇರುವುದು ಎಷ್ಟು? ರೈತರಿಗೆ ಕಾರ್ಖಾನೆಗಳ ಬಾಕಿ ಕುರಿತಂತೆ ಸ್ಪಷ್ಟತೆ ಇಲ್ಲ. ಎಫ್‌ಆರ್‌ಪಿಗಿಂತ ಅಧಿಕ ಮೊತ್ತದ ದರ ಪಾವತಿಸಿದ್ದೇವೆ ಎಂದು ಕಾರ್ಖಾನೆಗಳ ಮಾಲೀಕರು ವಾದಿಸಿದರು. ಕರಾರು ಮಾಡಿಕೊಳ್ಳುವಾಗ ಇದ್ದ ಬೆಲೆ ಬಳಿಕ ತಗ್ಗಿದೆ ಎಂಬ ಕಾರಣ ನೀಡಿ ನಿಗದಿಯಂತೆ ಬಾಕಿ ಪಾವತಿಸಿಲ್ಲ ಎಂಬುದು ರೈತರ ಅಳಲು. ರೈತರ ಪ್ರಕಾರ 480 ಕೋಟಿ ರೂ. ಬಾಕಿ ಉಳಿದಿದೆ. ರೈತರು ಮತ್ತು ಕಾರ್ಖಾನೆಗಳ ಮಾಲೀಕರ ನಡುವಿನ ಕರಾರು ಹೊರತಾಗಿ ಎಫ್‌ಆರ್‌ಪಿ ಪ್ರಕಾರ ಒಟ್ಟು 58 ಕೋಟಿ ರೂ. ಬಾಕಿ ಇದೆ. ಈ ಪೈಕಿ 20 ಕೋಟಿ ರೂ. ಮೂರು ವರ್ಷಗಳ ಹಿಂದಿನ ಬಾಕಿ. ಈ ಬಾಕಿ ಉಳಿಸಿಕೊಂಡಿದ್ದ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಸೇರಿ ಮೂರು ಫ್ಯಾಕ್ಟರಿಗಳು ಮುಚ್ಚಿವೆ. ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಫ್ಯಾಕ್ಟರಿಗಳು ಎಫ್‌ಆರ್‌ಪಿ ಪಾವತಿಸಿವೆ. ಬಾಗಲಕೋಟ ಜಿಲ್ಲೆಯಲ್ಲಿ ಕೆಲವು ಫ್ಯಾಕ್ಟರಿಗಳು ಎಫ್‌ಆರ್‌ಪಿ ಬಾಕಿ ಉಳಿಸಿಕೊಂಡಿವೆ ಎಂಬ ಮಾಹಿತಿ ನೀಡಲಾಗಿದೆ.

About the author

ಕನ್ನಡ ಟುಡೆ

Leave a Comment