ರಾಷ್ಟ್ರ ಸುದ್ದಿ

1971 ಪಾಕ್ ವಿರುದ್ದದ ಲೊಂಗೇವಾಲಾ ಕದನದ ಹೀರೋ ಕುಲ್ದೀಪ್ ಸಿಂಗ್ ಚಾಂದ್ಪುರಿ ನಿಧನ

ಚಂಡೀಗಢ: 1971ರ ಪಾಕಿಸ್ತಾನದ ವಿರುದ್ಧದ ಲೊಂಗೇವಾಲಾ ಕದನದ ಹೀರೋ ಕುಲ್ದೀಪ್ ಸಿಂಗ್ ಚಾಂದ್ಪುರಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದ್ದಾರೆ. ಸುದೀರ್ಘ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕುಲ್ದೀಪ್ ಅವರಿಗೆ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದರಂತೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. 1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧ ಸಂದರ್ಭದಲ್ಲಿ ಚಾಂದ್ಪುರಿಯವರು ಸೇನಾ ಮೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
1971ರ ಡಿಸೆಂಬರ್ 4 ರಂದು ರಾಜಸ್ಥಾನದ ಥಾರ್ ಮರುಭೂಮಿಯ ಜೈಸಲ್ಮೇರ್ ಸುತ್ತಲಿನ ಪ್ರದೇಶವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪಂಜಾಬ್ ರೆಜಿಮೆಂಟ್ 23ನೇ ಬೆಟಾಲಿಯನ್ ಪಡೆಗೆ ವಹಿಸಲಾಗಿತ್ತು. ಇದೇ ಪಂಜಾಬ್ ರೆಜಿಮೆಂಟ್ ನ 120 ಸೈನಿಕ ಬಲದ ಕಂಪನಿಯೊಂದು ಮೇಜಲ್ ಕುಲ್ದೀಪ್ ಸಿಂಗ್ ಚಾಂದ್ಪುರಿ ನೇತೃತ್ವದಲ್ಲಿ ಲೊಂಗೇವಾಲಾ ಎಂಬ ಪ್ರದೇಶದ ಭದ್ರತೆಗೆ ನಿಯೋಜಿಸಲಾಗಿತ್ತು. ಪೂರ್ವ ಪಾಕಿಸ್ತಾನದಲ್ಲಿ ಯುದ್ಧ ಆರಂಭಗೊಂಡಿದ್ದರಿಂದ ಸಶಸ್ತ್ರ ಪಡೆಗಳ ಹೆಚ್ಚಿನ ಗಮನ ಸಹಜವಾಗಿಯೇ ದೇಶದ ಪೂರ್ವ ಭಾಗದ ಮೇಲಿತ್ತು. ಇದರ ಲಾಭ ಪಡೆಯುವ ಉದ್ದೇಶದಿಂದ ಆಶ್ಚರ್ಯಕರ ರೀತಿಯಲ್ಲಿ ಭಾರತದ ಪಶ್ಚಿಮ ಭೂಭಾಗದ ಮೇಲೆ ದಾಳಿ ಎಸಗಿ, ರಾಜಸ್ಥಾನದ ಜೈಸಲ್ಮೇರ್ ನ್ನು ವಶಪಡಿಸಿಕೊಳ್ಳುವ ಇರಾದೆಯಿಂದ ಪಾಕಿಸ್ತಾನದ ಸೇನೆ ಅಮೆರಿಕಾ ನಿರ್ಮಿತ 45 ಪ್ಯಾಟನ್ ಟ್ಯಾಂಕರ್ ಗಳೊಂದಿಗೆ 2,500 ಜನರಿದ್ದ ತನ್ನ ಒಂದಿಡೀ ಪದಾತಿ ದಳವನ್ನು ಇದೇ ಲೊಂಗೇವಾಲ ಮಾರ್ಗವಾಗಿ ಜೈಸಲ್ಮೇರ್’ನೆಡೆಗೆ ಮುನ್ನುಗ್ಗಲು ಸೂಚಿಸಿತ್ತು. ಆಗ ತಾನೇ ನಿರ್ಮಾಣವಾಗಿದ್ದ ಜಸಲ್ಮೇರ್’ನ ಕಚ್ಚಾ ವಾಯು ನೆಲೆಯಲ್ಲಿದ್ದ ಬ್ರಿಟನ್ ನಿರ್ಮಿಕ ಹಾಕರ್ ಹಂಟರ್ ಯುದ್ಧ ವಿಮಾನಗಳು ರಾತ್ರಿ ವೇಲೆ ಶತ್ರುವನ್ನು ಗುರ್ತಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ವಾಯುಸೇನೆ ಕೈಕಟ್ಟಿ ಕುಳಿತಿತ್ತು.
ಶತ್ರುವಿನ ಸೂಚನೆ ದೊರೆತರೂ ಲೊಂಗೇವಾಲಾಗೆ ಹೆಚ್ಚುವರಿ ತುಕಡಿಗಳನ್ನು ಕಳುಹಿಸಿಕೊಡಲು ಕೊಂಚ ಸಮಯದ ಅಗತ್ಯವಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದಿಢೀರ್ ಮೈಮೇಲೆ ಎರಗಿದ ಅಗಾಧ ಬಲದ ಶತ್ರುವಿಗೆ ಎದೆಗುಂದದ ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ ನೇತೃತ್ವದಲ್ಲಿದ್ದ ಕಂಪನಿ ಹಾಗೂ ಗಡಿ ಭದ್ರತಾ ಪಡೆಯ ಯೋಧರು ತಮ್ಮ ಜೀವದ ಹಂಗು ತೊರೆದಿದ್ದಲ್ಲದೇ, ಇತಿಮಿತಚಿಗಳನ್ನು ಲೆಕ್ಕಿಸದೇ ಹೋರಾಡಿದರು. ಅಪ್ರತಿಮ ಶೌರ್ಯ ಮೆರೆದು ತಮ್ಮ ಬತ್ತಳಿಕೆಯಲ್ಲಿದ್ದ ಸಣ್ಣ ಶಸ್ತ್ರಾಸ್ತ್ರಗಳ ಸಹಾಯದಿಂದ ಆ 6 ಗಂಟೆಗಳ ಘೋರ ಕದನದಲ್ಲಿ ಕಾದಾಡಿ ಲೊಂಗೇವಾಲಾ ನೆಲೆಯನ್ನು ಮುಂಜಾನೆಯವರೆಗೂ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಮರುದಿನ ಸೂರ್ಯನ ಕಿರಣಗಳು ಭೂಮಿಗೆ ಬರುತ್ತಿದ್ದಂತೆಯೇ ದಾಳಿ ಎರಗಿದ್ದ ಭಾರತೀಯ ವಾಯುಪಡೆ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿತು. ತಮ್ಮಲ್ಲಿದ್ದ ಮಾನವ ಸಂಪನ್ಮೂಲ ಶಸ್ತ್ರಾಸ್ತ್ರಗಳ ನೆರವಿನಿಂದ ಅದ್ಭುತ ಕದನ ತಂತ್ರಗಾರಿಕೆ ಮೆರೆದ ಕುಲ್ದೀಪ್ ಸಿಂಗ್ ಅವರ ಚಾಣಾಕ್ಷತೆಗೆ ವಿವಿಧ ದೇಶಗಳಿಂಗ ಸೇನಾ ಪಂಡಿತರಿಂದ ಮೆಚ್ಚುಗೆಗಳು ವ್ಯಕ್ತವಾಗಿತ್ತು.
ದೇಶ ಕಂಡ ಅದ್ಭುತ ಯೋಧರಲ್ಲೊರಾಗಿರುವ ಬ್ರಿಗೇಡಿಯರ್ ಕುಲ್ದೀಪ್ ಸಿಂಗ್ ಚಾಂದ್ಪುರಿ 1965 ಹಾಗೂ 1971ರ ಯುದ್ಧಗಳೆರಡರಲ್ಲೂ ಭಾಗಿಯಾಗಿದ್ದ ಧೀರೋದಾತ್ತ ಸೇನಾಧಿಕಾರಿ. ಅಲ್ಲದೆ, ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲೂ ಕಾರ್ಯ ನಿರ್ವಹಿಸಿದ್ದ ಸಿಂಗ್, ಗಲಭೆ ಪೀಡಿದ ಗಾಜಾದಲ್ಲಿ ಒಂದು ವರ್ಷದ ಮಟ್ಟಿಗೆ ನಿಯೋಜಿತರಾಗಿದ್ದರು. ಬಳಿಕ ಮಧ್ಯಪ್ರದೇಶ ಮ್ಹೋನ ಪ್ರತಿಷ್ಠಿತ ಪದಾತಿ ದಳ ಶಾಲೆಯಲ್ಲಿ ಬೋಧರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಬ್ರಿಗೇಡಿಯರ್ ಆಗಿ ನಿವೃತ್ತರಾದ ಕುಲ್ದೀಪ್ ಅವರು, ವಿಶಿಷ್ಟ ಸೇವಾ ಪದಕ ಗೌರವಕ್ಕೂ ಪಾತ್ರರಾಗಿದ್ದಾರೆ.

About the author

ಕನ್ನಡ ಟುಡೆ

Leave a Comment