ರಾಜಕೀಯ

2019ರ ಲೋಕಸಭೆ ಚುನಾವಣೆ: ದರ್ಶನ್ ಪುಟ್ಟಣ್ಣಯ್ಯಗೆ ಬಿಜೆಪಿ ಗಾಳ

ಬೆಂಗಳೂರು: ಇತ್ತೀಚೆಗೆ ನಡೆದ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗಮನಾರ್ಹ ಪ್ರಮಾಣದಲ್ಲಿ ಮತ ಗಳಿಸಿದ್ದು ಬಿಜೆಪಿಯಲ್ಲಿ ಹೊಸ ಭರವಸೆ ಮೂಡಿಸಿದೆ, ಹೀಗಾಗಿ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ರೈತ ನಾಯಕ ಹಾಗೂ ಮಾಜಿ ಶಾಸಕ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಅವರನ್ನು ಕರೆತರಲು ಬಿಜೆಪಿ ಪ್ರಯತ್ನಿಸುತ್ತಿದೆ.  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ಹುಟ್ಟಿಸಿದ್ದ ಯುವನಾಯಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬಿಜೆಪಿಯು ತನ್ನತ್ತ ಸೆಳೆಯುವ ಯತ್ನ ಮಾಡುತ್ತಿದೆ.
ಅಮೆರಿಕಾದಿಂದ ಮೇಲುಕೋಟೆಗೆ ಬಂದು ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು ವಿರುದ್ಧ ಸೋಲನುಭವಿಸಿದ್ದರು. ಸ್ವರಾಜ್ ಇಂಡಿಯಾ ಪಕ್ಷದಿಂದ ರೈತ ಸಂಘ ಹಾಗೂ ಕಾಂಗ್ರೆಸ್‌ನ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಅವರು ಮೊದಲ ಬಾರಿಗೆ 74ಸಾವಿರ ಮತಗಳಿಸುವ ಮೂಲಕ ಗಮನಸೆಳೆದಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನಡೆದ ಮಂಡ್ಯ ಲೋಕಸಭೆ ಉಪಚುನಾವಣೆ ಸಮಯದಲ್ಲಿ ಬಿಜೆಪಿಯ ಮುಖಂಡ ಆರ್.ಅಶೋಕ್ ಅವರು ದರ್ಶನ್ ಪುಟ್ಟಣ್ಣಯ್ಯ ಅವರ ತಾಯಿಯವರನ್ನು ಭೇಟಿ ಆಗಿದ್ದರು. ಈ ಸಂದರ್ಭದಲ್ಲಿ ನಡೆದ ಮಾತು-ಕತೆ ತರುವಾಯ ಬಿಜೆಪಿಯು ಹೀಗೊಂದು ಪ್ರಯತ್ನ ಮಾಡುತ್ತಿದೆ. ಮಂಡ್ಯ ಲೋಕಸಭಾ ಉಪ-ಚುನಾವಣೆಯಲ್ಲಿ 2 ಲಕ್ಷದ 44 ಸಾವಿರ ಮತಗಳನ್ನು ಗಳಿಸಿದ್ದು ಸ್ವತಃ ಬಿಜೆಪಿ‌ ನಾಯಕರಿಗೇ ಅಚ್ಚರಿ ಮೂಡಿಸಿತ್ತು. ಜೊತೆಗೆ, ಮಂಡ್ಯದಲ್ಲೂ  ಹೆಬ್ಬಾಗಿಲು ತೆಗೆಯುವ ಸಾಧ್ಯಾಸಾಧ್ಯತೆಯನ್ನು ಬಿಜೆಪಿ ಮುಖಂಡರಿಗೆ ಈ ಚುನಾವಣೆ ತೆರೆದಿಟ್ಟಿತ್ತು.
ಇದೇ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನ ತನ್ನದಾಗಿಸಿಕೊಳ್ಳಲು ಕಮಲ ಪಕ್ಷ ಈಗ ಮಾಸ್ಟರ್‌ಪ್ಲಾನ್ ರೂಪಿಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ  ದರ್ಶನ್ ಅವರಿಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ನಂತರ ಜೆಡಿಎಸ್ ಜೊತೆ ಕೈ ಜೋಡಿಸಿತು, ನಾವು ದರ್ಶನ್ ಪುಟ್ಟಣ್ಣಯ್ಯ ಅವರ ಸಂಪರ್ಕದಲ್ಲಿದ್ದೇವೆ,  ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment