ರಾಷ್ಟ್ರ ಸುದ್ದಿ

2019 ಲೋಕಸಭಾ ಚುನಾವಣೆ 3ನೇ ಪಾಣಿಪತ್ ಕದನದಂತೆ, ಗೆಲ್ಲಲೇಬೇಕು: ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ  ಮೂರನೇ ಪಾಣಿಪತ್  ಕದನಕ್ಕೆ ಹೋಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಾಘಟಬಂದನ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ರಾಜಕೀಯ ರಾಸಾಯನಶಾಸ್ತ್ರದಂತೆ , ಭೌತಶಾಸ್ತ್ರದಂತೆ ಅಲ್ಲ, ಉತ್ತರ ಪ್ರದೇಶದಲ್ಲಿ 2014ರ ಸಾಧನೆ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂರನೇ ಪಾಣಿಪತ್ ಕದನಕ್ಕೂ ಮುನ್ನ ಮರಾಠರು 131 ಯುದ್ದಗಳಲ್ಲಿ ಗೆಲುವು ಸಾಧಿಸಿ ಉತ್ತುಂಗ ಶಿಖರಕ್ಕೇರಿದರು. ನಂತರ. ಭಾರತವನ್ನು 200 ವರ್ಷಗಳವರೆಗೆ ಗುಲಾಮರನ್ನಾಗಿ ಮಾಡಲಾಯಿತು. 2019 ಚುನಾವಣೆ ಸೈದ್ಧಾಂತಿಕ ಯುದ್ಧವಾಗಿದೆ. ಇದು ದಶಕಗಳವರೆಗೆ ಪರಿಣಾಮವನ್ನು ಬೀರುತ್ತದೆ, ಆದ್ದರಿಂದ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ ಎಂದರು.

ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಯೋಧ್ಯೆಯಲ್ಲಿಯೇ ಆದಷ್ಟು ಬೇಗ ರಾಮಮಂದಿರ ನಿರ್ಮಿಸಲಾಗುವುದು ಎಂದು ಪುನರುಚ್ಚರಿಸಿದ ಅಮಿತ್ ಶಾ, ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಶೇ, 10 ರಷ್ಟು ಮೀಸಲಾತಿ,  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ  ತೆರಿಗೆಯಲ್ಲಿ ವಿನಾಯಿತಿ, ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳ ಬಗ್ಗೆ ಗುಣಗಾನ ಮಾಡಿದರು.ಆದಾಗ್ಯೂ, ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡದಲ್ಲಿನ ಸೋಲಿನ ಬಗ್ಗೆ ಅಮಿತ್ ಶಾ ತುಟ್ಟಿ ಬಿಚ್ಚಲಿಲ್ಲ.

About the author

ಕನ್ನಡ ಟುಡೆ

Leave a Comment