ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದ ಒರ್ವನಿಗೆ ವೈರಲ್ ನಿಮೋನಿಯಾ ತಗುಲಿದ್ದು, ಕೊರೊನಾ ಎಂಬ ಸುಳ್ಳು ಸುದ್ದಿ ಹರಡಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆಗೆ ಕಿವಿಗೊಡಬೇಡಿ. ಡಾ.ಎಸ್.ಎಸ್. ಸಿದ್ದನ್ನವರ ತಾಲೂಕಾ ಆರೋಗ್ಯ ಅಧಿಕಾರಿ, ಸಂಪನ್ಮೂಲ ಅಧಿಕಾರಿ

ಬೈಲಹೊಂಗಲ : ಕೊರೊನಾ ಹಾವಳಿಯ ಹಿನ್ನಲೆಯಲ್ಲಿ ವಿದೇಶದಿಂದ ಪಟ್ಟಣಕ್ಕೆ ಆಗಮಿಸಿದ ಮೂರು ಜನರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ, ಸಂಪನ್ಮೂಲ ಅಧಿಕಾರಿ ಡಾ.ಎಸ್.ಎಸ್. ಸಿದ್ದನ್ನವರ ಹೇಳಿದರು.
ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಕೊರೊನಾ ಸೊಂಕು ತಡೆಗಟ್ಟಲು ಮುಂಜಾಗೃತಾ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಗೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ, ಅಂಗನವಾಡಿ ಮೇಲ್ವಿಚಾರಕರಿಗೆ, ಪಿ.ಡಿ.ಓ ಗಳಿಗೆ ತರಬೇತಿ ಸಭೆಯಲ್ಲಿ ಮಾತನಾಡಿ, ಜರ್ಮನದಿಂದ ಓರ್ವ ಹಾಗೂ ಶಾರ್ಜಾ ದೇಶದಿಂದ ಆಗಮಿಸಿದ ಓರ್ವ ಮಹಿಳೆ, ಮಗು ಅವರ ಮನೆಗೆ ತೆರಳಿ, ತಿಳಿ ಹೇಳಿ ನೀಗಾವಹಿಸಲಾಗಿದೆ. ಮನೆಯ ಜನರಿಗೆ ಅವರನ್ನು ಪ್ರತ್ಯೇಕವಾಗಿ ಇಡಲು ತಿಳಿಸಿ, ಸತತ ಕೆಮ್ಮು, ಜ್ವರ, ನೆಗಡಿ, ಉಸಿರಾಟ ತೊಂದರೆ ಲಕ್ಷಣ ಕಂಡು ಬಂದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕಿಸಲು ತಿಳಿಸಲಾಗಿದೆ. ಇಪ್ಪತ್ತೆಂಟು ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿ ಇವರ ಮೇಲೆ ನೀಗಾ ಇಡಲಾಗುವದು ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ೫ ಹಾಸಿಗೆಯ ಸುವ್ಯಸ್ಥಿತ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಮಾರಕಟ್ಟೆಯಲ್ಲಿ ಮಾಸ್ಕಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ರೋಗದ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರು ತಮ್ಮ ಮನೆ, ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಬೀಸಿ ನೀರು ಸೇವಿಸಬೇಕು. ಕೈಗಳನ್ನು ಮೇಲಿಂದ ಮೇಲೆ ಸಾಬೂನಿನಿಂದ ತೊಳೆದುಕೊಳ್ಳಬೇಕು. ಸಂಶಯಾಸ್ಪದ ರೋಗಿಗಳು ಗ್ರಾಮಗಳಿಗೆ ಬಂದಾಗ ಕೂಡಲೇ ಮಾಹಿತಿ ನೀಡಬೇಕು. ಪಟ್ಟಣ, ಗ್ರಾಮೀಣ ಭಾಗದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುವದು ಎಂದರಲ್ಲದೆ, ರೋಗಹರಡುವಿಕೆ ಮುಂಜಾಗರೂಕ ಕ್ರಮ ತಪ್ಪು ತಿಳುವಳಿಕೆಗಳ ಹೊಡೆದುಹಾಕುವ ಕುರಿತು, ಮತ್ತು ಹಾಗೂ ಚಿಕಿತ್ಸೆಯ ಕುರಿತು ಮಾರ್ಮಿಕವಾಗಿ ವಿವರಿಸಿದರು.
ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಅಧ್ಯಕ್ಷತೆವಹಿಸಿ ಮಾತನಾಡಿ, ನೂರಕ್ಕೂ ಹೆಚ್ಚು ಜನ ಸೇರುವ ಜಾತ್ರೆ, ಮದುವೆ, ಸಮಾರಂಭ, ಸಭೆ, ಸಂತೆ, ಸಿನೇಮಾ ಮಂದಿರಗಳನ್ನು ಒಂದು ವಾರಗಳ ಕಾಲ ಜಿಲ್ಲಾಧಿಕಾರಿಗಳ ಆದೇಶದನ್ವಯ ರದ್ದುಪಡಿಸಲಾಗಿದೆ. ಯಾರಾದರೂ ಅನಿವಾರ್ಯ ಸಂದರ್ಭದಲ್ಲಿ ಕಾರ್ಯಕ್ರಮ ಜರುಗುಸುವದಿದ್ದರೆ, ೧೦೦ ಜನಕ್ಕಿಂತ ಕಡಿಮೆ ಜನಸಂಖ್ಯೆಯನ್ನೊಳಗೊoಡು ಕಾರ್ಯಕ್ರಮ ಜರುಗಿಸಲು ಅನುಮತಿ ಪಡೆದುಕೊಳ್ಳಬೇಕೆಂದರು.
ತಾಪಂ ಇಓ ಸಮೀರ ಮುಲ್ಲಾ ಮಾತನಾಡಿ, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು, ಆರೋಗ್ಯ ಇಲಾಖೆಯೊಂದಿಗೆ ಕೈಜೊಡಿಸಿ ಜನರಲ್ಲಿರುವ ತಪ್ಪು ತಿಳುವಳಿಕೆಯನ್ನು ಹೊಗಲಾಡಿಸಿ ರೋಗ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಜರುಗಿಸಲು ಸೂಚಿಸಿದರು.
ಸಿಡಿಪಿಓ ಮಹಾಂತೇಶ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಗ್ರಾಮೀಣ ಕುಡಿಯುವ ನೀರು ನೈರ್ಮಲೀಕರಣ ಇಲಾಖೆ ಅಭಿಯಂತರ ಕೆ.ಎಚ್.ವಂಟಗುಡಿ, ಹಾಗೂ ತಾಲೂಕಾಧಿಕಾರಿಗಳು ಇದ್ದರು.