ಬ್ರೇಕಿಂಗ್ ನ್ಯೂಸ್

ಐವರು ಅಂತರಾಜ್ಯ ಅಪಹರಣಕಾರರ ಬಂಧನ

ಚಿಕ್ಕೋಡಿ : ಹಣಕ್ಕಾಗಿ ಸುಪಾರಿ ಪಡೆದು ಜನರನ್ನು ಅಪಹರಿಸುತ್ತಿದ್ದ ಐವರು ಅಂತರಾಜ್ಯ ಅಪಹರಣಕಾರರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಾರ್ಚ್ 15 ರಂದು ಶಬ್ಬೀರ್ ಬಾಬಾಲಾಲ್ ಮಕಾಂದಾರ (54) ಅವರು ನಿಪ್ಪಾಣಿ ಬಳಿಯ ಕೊಗನೊಳ್ಳಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಇಚಲಕರಂಜಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ಆರೋಪಿಗಳು ಬಲವಂತವಾಗಿ ಮಗನ ಮುಂದೆಯೇ ಶಬ್ಬೀರ್ ಮಕಾಂದಾರನನ್ನು ತಮ್ಮ ಇನ್ನೋವಾ ಕಾರಿನಲ್ಲಿ ಹಾಕಿಕೊಂಡು ಅಪಹರಣಗೈದಿದ್ದರು. ಈ ಕುರಿತಂತೆ ಅಪಹರಣಗೊಂಡ ಶಬ್ಬೀರ್ ಅವರ ಮಗ ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಇಂದು ಕೊಲ್ಲಾಪುರ ಹದ್ದಿಯ ಕಳಂಬವಾಡಿ ಬಳಿ ಐವರು ಆರೋಪಿಗಳನ್ನು ಬಂಧಿಸಿ, ಅಪಹರಣಕ್ಕೆ ಒಳಗಾಗಿದ್ದ ಶಬ್ಬೀರ್ ಅವರನ್ನು ಬಿಡುಗಡೆಗೊಳಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಹೀಗಾಗಿ ಪ್ರಕರಣ ಸುಖಾಂತ್ಯದಲ್ಲಿ ಕೊನೆಯಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಎಸ್ ಪಿ ಲಕ್ಷಣ ನಿಂಬರಗಿ ಅಭಿನಂದನೆ ತಿಳಿಸಿದ್ದಾರೆ.
ಕೊಲ್ಲಾಪುರ ಜಿಲ್ಲೆ ಕದಂವಾಡಿಯ ಹಿದಾಯತ ಬಾಗವಾನ್ (30) ಎನ್ನುವ ಮುಖ್ಯ ಆರೋಪಿ ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಶಬ್ಬೀರ್ ನನ್ನು ಅಪಹರಿಸಲು ಬಂಧಿತ ಆರೋಪಿಗಳಿಗೆ ಸುಪಾರಿ ನೀಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮುಖ್ಯ ಆರೋಪಿ ಹಿದಾಯತ್ ಪರಾರಿಯಾಗಿದ್ದಾನೆ. ಪೊಲೀಸರು ಹಿದಾಯತ್ ಮತ್ತು ಆತನ ಹಿಂದೆ ಮತ್ತಾರು ಇದ್ದಾರೆ ಎನ್ನುವ ತನಿಖೆಯಲ್ಲಿ ತೊಡಗಿದ್ದಾರೆ.
ರಫೀಕ್ ನದಾಫ್, ಮುಜಫ್ಫರ್ ಸಯ್ಯದ್, ಮೋಹನ ಖವರೆ ಮತ್ತು ತುಕಾರಾಮ ಲಾಂಬೊಲೆ, ನಾಲ್ವರೂ ಕೊಲ್ಲಾಪುರದವರು ಮತ್ತು ಚಿಕ್ಕೋಡಿ ತಾಲೂಕು ಶಿರಗಾಂವಿಯ ರಜತ್ ನದಾಫ ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಅಪರಾಧಿಕ ಪ್ರಕರಣಗಳಿರುವ ಶಂಕೆ ಇದ್ದು, ಈ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

About the author

admin