ಬೆಳಗಾವಿ ಜಿಲ್ಲೆಯ ವಸತಿ ಯೋಜನೆಗಳಲ್ಲಿ ಭಾರೀ ಅಕ್ರಮ; ಅಥಣಿ ತಾಲೂಕಿನಲ್ಲಿ ಸರ್ಕಾರಿ ನೌಕರರೇ ಫಲಾನುಭವಿಗಳು!

ಬೆಳಗಾವಿ: ಎಸ್ಸಿ/ಎಸ್ಟಿ ಫಲಾನುಭವಿಗಳ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡಿಸಿಕೊಂಡು, ಅವರಿಗೆ ಅಲ್ಪ-ಸ್ವಲ್ಪ ಹಣ ನೀಡಿ ಸರ್ಕಾರಿ ನೌಕರರೇ ದೊಡ್ಡ ಮನೆಗಳನ್ನು ಕಟ್ಟಿಕೊಳ್ಳುತ್ತಿರುವ ಆಘಾತಕಾರಿ ಸಂಗತಿ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆಥಣಿ ತಾಲೂಕಿನ ಐಗಳಿ ಗ್ರಾಮ ಪಂಚಾಯತ ಹದ್ದಿಯಲ್ಲಿ ನಡೆದಿವೆ ಎನ್ನಲಾದ ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆಗೆ ಆದೇಶ ನೀಡಲಾಗಿದೆಯಾದರೂ, ತನಿಖೆಯ ಹೆಸರಿನಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಲಾಗುತ್ತಿದೆ. ಈ ಮೂಲಕ ತಪ್ಪಿತಸ್ಥರ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ ಕೂಡ ಇದೇ ತಾಲೂಕಿನವರು ಆಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಆಗುತ್ತಿಲ್ಲ ಎನ್ನಲಾಗುತ್ತಿದೆ.
ಐಗಳಿಯ ಪರಶುರಾಮ ಗದಾಡಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಪಡೆದು ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಆಕ್ರಮದ ಕುರಿತಂತೆ ದಾಖಲೆಗಳ ಸಮೇತ ಒಟ್ಟು 46 ಪುಟಗಳ ದೂರನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಲಾಗಿದೆ. ಡಿಸೆಂಬರ ತಿಂಗಳಲ್ಲಿಯೇ ದೂರು ಸಲ್ಲಿಸಲಾಗಿದೆ. ಅವರು ಅದನ್ನು ಅಥಣಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕಳಿಸಿ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಬರೆದಿದ್ದರು. ಆದರೆ ಪ್ರಕರಣದಲ್ಲಿ ತಪ್ಪಿತಸ್ಥ ಸರ್ಕಾರಿ ನೌಕರರ ವಿರುದ್ಧ ಇದುವರೆಗೆ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ.
ತಮ್ಮ ದೂರಿನಲ್ಲಿ ಪರಶುರಾಮ ಗದಾಡಿ ಅವರು ಡಾ.ಅಂಬೇಡ್ಕರ ಅವಾಸ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ಗ್ರಾಮೀಣ ಚಮ್ಮಾರರಿಗಾಗಿ ವಿಶೇಷ ವಸತಿ ಯೋಜನೆಗಳ ಅಡಿಯಲ್ಲಿ 2015-17, 2016-17 ಮತ್ತು 2017-18 ರಲ್ಲಿ ಐಗಳಿ ಗ್ರಾಮದಲ್ಲಿ ಮಂಜೂರಾದ ಮನೆಗಳು, ಮನೆಗಳ ಕೋಡ್ ನಂಬರ್, ಮೂಲ ಫಲಾನಿಭವಿಗಳ ಹೆಸರು, ಫಲಾನುಭವಿಗಳ ಹೆಸರಿನಲ್ಲಿ ಮಂಜೂರಾದ ಹಣದಲ್ಲಿ ಮನೆ ಕಟ್ಟಿಸಿಕೊಂಡ ಸರ್ಕಾರಿ ನೌಕರರ ಹೆಸರುಗಳ ಸಮೇತ ಜಿಲ್ಲಾ ಪಂಚಾಯತಿಗೆ ದೂರು ನೀಡಿದ್ದಾರೆ.
ಗದಾಡಿ ಅವರ ಪ್ರಕಾರ, ವಿಶೇಷವೆಂದರೆ ಬಹುತೇಕ ಸರ್ಕಾರಿ ಮನೆಗಳು ಮಂಜೂರಾಗಿರುವುದು ಹೆಣ್ಣು ಮಕ್ಕಳ ಹೆಸರಿನಲ್ಲಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದೇ ಕುಟುಂಬದ ಹಲವು ಸದಸ್ಯರ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡಿಸಿಕೊಂಡು ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಬಿಲ್ ಪಡೆಯಲು ಬೇಕಂತಲೇ ಒಂದೇ ಮನೆಗೆ ಎರಡ್ಮೂರು ಕಡೆ ಬಾಗಿಲುಗಳನ್ನು ಬಿಟ್ಟು ಬಿಲ್ ಪಡೆದುಕೊಳ್ಳಲಾಗಿದೆ. ಇದರಲ್ಲಿ ಸ್ಥಳೀಯ ಪಿಡಿಓ ನೇರವಾಗಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪಿಡಿಓ ಮಹಾದೇವ ಹಳ್ಳಿ ಮತ್ತು ಸ್ಥಳೀಯ ಪಂಚಾಯತಿ ಅಧ್ಯಕ್ಷ ಯಲ್ಲಪ್ಪ ಶಿಂಗಿ ಇಬ್ಬರೂ ಸೇರಿ ಇಂತಿಷ್ಟು ಪರ್ಸೆಂಟೇಜ್ ಹಣ ಪಡೆದು ಅಕ್ರಮವಾಗಿ ಮನೆಗಳನ್ನು ಮಂಜೂರು ಮಾಡಿಸುತ್ತಿದ್ದಾರೆಂದು ಗದಾಡಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ‘ಟುಡೇ ಬ್ರೇಕಿಂಗ್ಸ್’ ಗೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಓ ರಾಜೆಂದ್ರ ಕೆ.ವಿ., ಇಂತಹ ಪ್ರಕರಣಗಳು ಜಿಲ್ಲೆಯ ಅನೇಕ ಕಡೆಗಳಿಂದ ವರದಿಯಾಗಿದ್ದು, ಅವುಗಳ ತನಿಖೆಯನ್ನು ಆರಂಭಿಸಲಾಗಿದೆ. ಅಥಣಿ ತಾಲೂಕಿನ ಐಗಳಿಯಲ್ಲಿ ಮನೆಗಳ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಪ್ರಕರಣವನ್ನೂ ತನಿಖೆಗೆ ವಹಿಸಲಾಗಿದೆ. ಸ್ಥಳೀಯ ತಾಲೂಕು ಪಂಚಾಯತಿ ಅಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ ಅಥವಾ ಇಲ್ಲ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜೇಂದ್ರ ಕೆ.ವಿ. ‘ಟುಡೇ ಬ್ರೇಕಿಂಗ್ಸ್’ ಗೆ ತಿಳಿಸಿದ್ದಾರೆ