ನಂದಿನಿ ಹಾಲು ಖರೀದಿ ತೀರ್ಮಾನ: ಸಿಎಂ ಯಡಿಯೂರಪ್ಪನವರಿಗೆ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ಬೆಂಗಳೂರು: ಕೆಎಂಎಫ್ ಮೂಲಕ ೭.೫ ಲಕ್ಷ ಲೀಟರ್ ಹಾಲನ್ನು ಸರ್ಕಾರ ಖರೀದಿಸಿ ಸ್ಲಂ ಹಾಗೂ ಬಡಜನರು ವಾಸಿಸುವ ಪ್ರದೇಶಗಳಲ್ಲಿ ಉಚಿತವಾಗಿ ಏಪ್ರಿಲ್ ೧೪ರವರೆಗೆ ಹಾಲು ವಿತರಣೆಗೆ ನಿರ್ಧರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೋನಾ ವೈರಾಣು ಸೋಂಕಿನ ತಡೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಎಂಎಫ್ ಮೂಲಕ ಹಾಲು ಖರೀದಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಬಡವರಿಗೆ ಗುರುವಾರದಿಂದಲೇ ಉಚಿತವಾಗಿ ವಿತರಿಸಲಾಗುವುದು. ಇದಕ್ಕಾಗಿ ಕೆಎಂಎಫ್‌ಗೆ ೩೨ ಕೋಟಿ ರೂಪಾಯಿಸಂದಾಯ ಮಾಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ಕ್ರಮದಿಂದಾಗಿ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ರಾಜ್ಯದ ಬಡವರಿಗೆ ಹಾಲು ಖರೀದಿಸಿ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವ ಮೂಲಕ ಮುಖ್ಯಮಂತ್ರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಸಮಸ್ತ ರೈತರವಾಗಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕೆಎಂಎಫ್ ಹಾಗೂ ರಾಜ್ಯದ ೧೪ ಹಾಲು ಒಕ್ಕೂಟಗಳಿಗೆ ನಷ್ಟವಾಗದಂತೆ ಮುಖ್ಯಮಂತ್ರಿಗಳು ನೋಡಿಕೊಂಡಿದ್ದಾರೆ. ಜೊತೆಗೆ ರಾಜ್ಯದ ಎಲ್ಲ ಒಕ್ಕೂಟಗಳ ೧೩ ಲಕ್ಷ ಕುಟುಂಬಗಳ ಬದುಕಿಗೆ ಆಸರೆಯಾಗಿದೆ. ಸರ್ಕಾರ ಖರೀದಿಸುವ ೭.೫ ಲಕ್ಷ ಲೀಟರ್ ಹಾಲವನ್ನು ಬಡವರಿಗೆ ಹಂಚಲು ಅನುಕೂಲವಾಗುವಂತೆ ೧೪ ಲಕ್ಷ ಪ್ಯಾಕೇಟ್ ಮಾಡಿ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.