3 ವರ್ಷದ ಮಗು ಕಣ್ಣಮುಂದೆ ಇದ್ದರೂ ಭೇಟಿ ಮಾಡಲಿಕ್ಕಾಗದೆ ಕಣ್ಣೀರು ಹಾಕಿದ್ದ ಬೆಳಗಾವಿಯ ನರ್ಸ್ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಳಗಾವಿ: ಮೂರು ವರ್ಷದ ಮಗು ಮತ್ತು ನರ್ಸ್ ಆಗಿರುವ ಮಗುವಿನ ತಾಯಿ ಇಬ್ಬರೂ ಎದುರಿಗಿದ್ದರೂ ಒಬ್ಬರಿಗೊಬ್ಬರು ಹತ್ತಿರಕ್ಕೆ ಬರಲಿಕ್ಕೆ ಆಗದೆ, ದೂರದಿಂದಲೇ ಕಣ್ಣೀರು ಹಾಕುತ್ತಿರುವ ತಾಯಿ ಮಗುವಿನ ಕರುಳು ಕಿವುಚಿ ಬರುವಂತಹ ಭಾವನಾತ್ಮಕ ದೃಶ್ಯ ನಿನ್ನೆ ಎಲ್ಲ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.
ಈ ದೃಶ್ಯವನ್ನು ನ್ಯೂಸ್ ಚಾನೆಲ್ ಗಳಲ್ಲಿ ನೋಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮುಂಜಾನೆ ಮಗುವಿನ ತಾಯಿಯೂ ಆಗಿರುವ ನರ್ಸ್ ನೊಂದಿಗೆ ಮಾತನಾಡಿ, ಮಾನಸಿಕ ಸ್ಥೈರ್ಯ ತುಂಬಿದ್ದಾರೆ. ನರ್ಸ್ ಸುನಂದಾ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕ್ವಾರಂಟೈನ್ ನಲ್ಲಿ ಇಡಲಾಗಿರುವ ಕೊರೊನಾ ಶಂಕಿತ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಕಳೆದ 15 ದಿನಗಳಿಂದ ನಗರದ ಹೊಟೇಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಕ್ವಾರಂಟೈನ್ ನಲ್ಲಿ ಇಡಲಾಗಿರುವ ಕೊರೊನಾ ಶಂಕಿತ ರೋಗಿಗಳನ್ನು ನೋಡಿಕೊಳ್ಳುತ್ತಿರುವ ನರ್ಸ್ ಗಳನ್ನು ಕೂಡ ಸಮಾಜದಲ್ಲಿ ಒಂದು ರೀತಿಯಲ್ಲಿ ಕೊರೊನಾ ಶಂಕಿತರಂತೆ ನೋಡಲಾಗುತ್ತಿದ್ದು, ಅದಕ್ಕಾಗಿ ಅವರನ್ನು ಹೊಟೇಲುಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಅನೇಕ ನರ್ಸ್ ಗಳು ಕಳೆದ ಎರಡು ವಾರಗಳಿಂದ ಮನೆ ಮತ್ತು ಮಕ್ಕಳನ್ನು ಭೇಟಿ ಮಾಡಲಿಕ್ಕೆ ಆಗಿಲ್ಲ.
ನಿನ್ನೆ ನರ್ಸ್ ಸುನಂದಾ ಮನೆಯವರೇ, ಆಕೆಯ ಮಗಳ ಹಠಕ್ಕೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ,ತಾಯಿಯ ಎದುರು ಮಗು ಮತ್ತು ಮಗುವಿನ ಎದುರು ತಾಯಿ ನಿಂತಿದ್ದರೂ, ಒಪ್ಪರಿಗೊಬ್ಬರು ಭೇಟಿ ಮಾಡದ ಸ್ಥಿತಿ ಉಂಟಾಗಿತ್ತು. ಇಬ್ಬರೂ ದೂರದಿಂದಲೇ ಅಳುತ್ತಿರುವ ಮನಕರಗಿಸುವ ಭಾವನಾತ್ಮಕ ದೃಶ್ಯ ಜನಸಾಮಾನ್ಯರು ಮರುಗುವಂತೆ ಮಾಡಿತ್ತು.
ದೃಶ್ಯವನ್ನು ನೋಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಮುಂಜಾನೆ ನರ್ಸ್ ಸುನಂದಾಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. “ಭಾಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ. ಮಕ್ಕಳನ್ನೂ ನೋಡಲಿಕ್ಕಾಗದೆ ಕೆಲಸ ಮಾಡುತ್ತಿದ್ದೀರಿ. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಟಿವಿ ನಲ್ಲಿ ನೋಡಿದ್ದೇನೆ. ಮುಂದೆ ನಿಮಗೆ ಅವಕಾಶ ಸಿಗುತ್ತದೆ. ಮುಂದೆ ನಿಮ್ಮನ್ನು ಗಮನಿಸುತ್ತೇನೆ” ಎಂದು ಮುಖ್ಯಮಂತ್ರಿ ಸುನಂದಾಗೆ ಭರವಸೆ ನೀಡಿದ್ದಾರೆ.
ನರ್ಸ್ ಅವರೊಂದಿಗೆ ಮಾತನಾಡಿ ಭರವಸೆ ತುಂಬಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಳಕಳಿಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.