ಕರೋನ, ರೈಲ್ವೆ ಇಲಾಖೆಗೆ 10 ದಿನದಲ್ಲಿ 1, 390 ಕೋಟಿ ರೂಪಾಯಿ ನಷ್ಟ : ಅಂಗಡಿ

ಹುಬ್ಬಳ್ಳಿ : ದೇಶಾದ್ಯಂತ ಮಾರಕ ಕೊರೊನಾ ಸೋಂಕಿನ ಕಾರಣ ರೈಲುಗಳ ಚಕುಬುಕ್ ಸಪ್ಪಳ ನಿಂತಿದೆ ಪರಿಣಾಮ, 10 ದಿನಗಳ ಅವಧಿಯಲ್ಲಿ ಭಾರತೀಯ ರೈಲ್ವೆ ಇಲಾಖೆಗೆ 1, 390 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಇದುವರೆಗೆ 12 ಲಕ್ಷ ಟಿಕೆಟ್ ಗಳನ್ನು ರದ್ದುಪಡಿಸಲಾಗಿದೆ ರೈಲುಗಳ ಸಂಚಾರ ಯಾವಾಗ ಪ್ರಾರಂಭವಾಗಲಿದೆ ಎಂಬದು ಇನ್ನೂ ಮೂರು ಅಥವಾ ನಾಲ್ಕುದಿನಗಳ ನಂತರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರೂ ಅವಸರದ ಕ್ರಮ ಇಲ್ಲ ಎಂದೂ ಸ್ಪಷ್ಟಪಡಿಸಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ದೇಶದ ಸಮಗ್ರ ಪರಿಸ್ಥಿತಿ ಗಮನಿಸಿ , ಅಧ್ಯಯನ ಮಾಡಿ ಮಾರ್ಗ ಸೂಚಿ ಮತ್ತು ಹಲವು ನಿರ್ದೇಶನ ನೀಡಲಿದ್ದು ಅದರ ಮಾಹಿತಿ ಆಧರಿಸಿ ರೈಲ್ವೆ ಮಂಡಳಿ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು.
ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಏಕಾಎಕಿ ತೀರ್ಮಾನ ಮಾಡಲು ಬರುವುದಿಲ್ಲ ಸಮಗ್ರವಾಗಿ ಅಲೋಚನೆ ಮಾಡಿಯೇ ಮುಂದಿನ ಹೆಜ್ಜೆ ಇಡಬೇಕಿದೆ ಎಂದು ಅವರು ಹೇಳಿದರು.
ಕಳದೆ ಮಾರ್ಚ್ ತಿಂಗಳಲ್ಲೆ ರೈಲ್ವೆ ಇಲಾಖೆಗೆ 450 ಕೋಟಿ ರೂಪಾಯಿ ನಷ್ಟವಾಗಿದೆ ದಿನವೊಂದಕ್ಕೆ ಸುಮಾರು 40 ಕೋಟಿರೂಪಾಯಿ ನಷ್ಟವಾಗುತ್ತಿದೆ ಎಂದು ಅವರು ಹೇಳಿದರು.
ಲಾಕ್ ಡೌನ್ ಇದೆ 14 ಕ್ಕೆ ಮುಗಿಯಲಿದೆಯೋ ಅಥವಾ ಮತ್ತು ಎಷ್ಟು ದಿನಗಳ ಕಾಲ ವಿಸ್ತರಣೆ ಯಾಗಲಿದೆ ಎಂಬುದನ್ನು ನೋಡಿಕೊಂಡ ನಂತರವಷ್ಟೆ ರೈಲುಗಳನ್ನು ಯಾವಾಗ ಯಾವ ಸಮಯದಲ್ಲಿ ಒಡಿಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಈ ತಿಂಗಳು ರೈಲುಗಳು ಹಳಿಗಳ ಮೇಲೆ ಒಡುವುದು ಅನುಮಾನ ಎಂಬ ಪರೋಕ್ಷ ಸುಳಿವು ನೀಡಿದ ಸಚಿವರು ಇದು ಜನರ ಬದುಕು , ಜೀವನ ಪ್ರಶ್ನೆಯಾಗಿರುವದಿಂದ ಯಾವುದೇ ಕಾರಣಕ್ಕೂ ಅವಸರದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.
ಮೇಲಾಗಿ ಕೇಂದ್ರ ಈ ವಿಚಾರದಲ್ಲಿ ಏಕ ಪಕ್ಷೀಯ ತೀರ್ಮಾನ ಮಾಡುವುದಿಲ್ಲ ಇದಕ್ಕೆ ಮೊದಲು ಎಲ್ಲ ರಾಜ್ಯಗಳ ಸಲಹೆ, ಅಭಿಪ್ರಾಯ ಪಡೆಯುವುದಾಗಿಯೂ ಸಚಿವ ಅಂಗಡಿ ಹೇಳಿದರು.