ಜಿಲ್ಲಾ ಉಸ್ತುವಾರಿ ವಿವಾದ: ವಿಚಿತ್ರ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿ ನಾಲ್ಕು ಮಂದಿ ಘಟಾನುಘಟಿ ಸಚಿವರಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಧಾರವಾಡ ಜಿಲ್ಲೆಯ ಜಗದೀಶ ಶೆಟ್ಟರ್ ಅವರನ್ನು ಸರ್ಕಾರ ಮುಂದುವರಿಸಿದ್ದಕ್ಕೆ ಸಂಬಂಧಪಟ್ಟಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.
“ಬೆಳಗಾವಿ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿ ನನಗೆ ಬೇಡ. ಜಗದೀಶ ಶೆಟ್ಟರ್ ಅವರೇ ಮುಂದುವರಿಯಲಿ ಎಂದು ನಾನೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ವಿನಂತಿ ಮಾಡಿಕೊಂಡಿದ್ದೆ. ಅದೇ ರೀತಿ ಆಗಿದೆ” ಎಂದು ಅವರು ತಿಳಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಜಲಸಂಪನ್ಮೂಲ ಖಾತೆಯನ್ನು ನಿಭಾಯಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇರುವುದರಿಂದ, ಅದರ ಜೊತೆ ಜಿಲ್ಲೆಯ ಉಸ್ತುವಾರಿಯನ್ನೂ ನೋಡಿಕೊಳ್ಳುವುದು ನನ್ನಿಂದ ಆಗುವುದಿಲ್ಲ” ಎಂದಿದ್ದಾರೆ. ಈ ಮೂಲಕ ಸ್ವಂತ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿಯನ್ನು ನಿರಾಕರಿಸುವ ಮೊದಲ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.
ಅವರ ಹೇಳಿಕೆ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದ್ದು, ಪ್ರತಿಕ್ರಿಯೆ ಕೊಡುವಾಗ ಜಲಸಂಪನ್ಮೂಲ ಸಚಿವರು, ಜಿಲ್ಲೆಯಲ್ಲಿ ಬೇರೆ ಸಚಿವರೂ ಇದ್ದಾರೆ ಎನ್ನುವುದನ್ನು ಮರೆತಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಪ್ರಕಾರ ಜಾರಕಿಹೊಳಿಯವರಿಗೆ ಉಸ್ತುವಾರಿ ಬೇಡ ಎಂದರೆ ಬೇಡ. ಆದರೆ, ಶೆಟ್ಟರ್ ಅವರನ್ನೇ ಮುಂದುವರಿಸಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಳ್ಳುವ ಹಿಂದಿನ ಮರ್ಮ ಏನು ಎಂದು ಪ್ರಶ್ನಿಸುತ್ತಿದ್ದಾರೆ.
ಜಾರಕಿಹೊಳಿಯವರು ತಮಗೆ ಉಸ್ತುವಾರಿ ಬೇಡ ಎಂದರೆ ತಮ್ಮಷ್ಟಕ್ಕೆ ತಾವು ಸುಮ್ಮನಿರಬಹುದಿತ್ತು. ಜಿಲ್ಲೆಯ ಉಳಿದ ಮೂವರು ಸಚಿವರಲ್ಲಿ ಯಾರಿಗಾದರೂ ಸಿಗುತ್ತಿತ್ತು. ಮುಖ್ಯಮಂತ್ರಿಯವರಿಗೆ ಶೆಟ್ಟರ್ ಅವರನ್ನೇ ಮುಂದುವರಿಸಲು ಹೇಳಿ ಬೇರೆ ಸಚಿವರ ಅವಕಾಶವನ್ನು ತಪ್ಪಿಸುವ ಹಿಂದಿನ ಉದ್ದೇಶ ಏನು? ಒಂದು ರೀತಿಯಲ್ಲಿ ಅವರು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Share