ಮದ್ಯ ಮಾರಾಟ ಬೇಡವೇ ಬೇಡ : ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ : ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಯಾವುದೇ ಕಾರಣಕ್ಕೂ ಅದು ಸಮುದಾಯಕ್ಕೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಮಾದರಿಗಳ ಪರಿಶೀಲನೆಗೆ ಅಗತ್ಯವಿರುವ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಬೆಳಗಾವಿ ಜಿಲ್ಲೆಗೂ ಒದಗಿಸಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.
ಕೋವಿಡ್ -19 ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.18) ಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ರಾತ್ರಿ ವೇಳೆ ಕೂಡ ನಿಗಾ ವಹಿಸುವ ಮೂಲಕ ಸೋಂಕಿತರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಇರಿಸಲು ಪ್ರಯತ್ನಿಸಬೇಕು ಎಂದರು. ಸೋಂಕಿತರ ಚಿಕಿತ್ಸೆ ವೇಳೆ ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್ ಗಳನ್ನು ನೇರವಾಗಿ ಖರೀದಿಸಲು ಅವಕಾಶವಿದ್ದರೆ ಪಡೆದುಕೊಳ್ಳಬಹುದು. ಕೆಲವೊಮ್ಮೆ ದಾನಿಗಳಿಂದ ಕೂಡ ಪ್ರಮಾಣೀಕೃತ ಕಿಟ್ ಗಳನ್ನು ಪಡೆದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸೋಂಕಿತರ ಪ್ರಮಾಣ ಹೆಚ್ಚಾದಂತೆ ಸರ್ಕಾರ ಮಾರ್ಗಸೂಚಿಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, ಆ ಪ್ರಕಾರ ಕ್ವಾರಂಟೈನ್ ಗೆ ಕ್ರಮಕೈಗೊಳ್ಳಬೇಕು. ಪೊಲೀಸ್ ಬಂದೋಬಸ್ತ್, ಕ್ವಾರಂಟೈನ್ ಕೇಂದ್ರಗಳ ಮೇಲೆ ನಿಗಾ ವಹಿಸಲು ಹೆಚ್ಚುವರಿ ಪೊಲೀಸ್ ಪಡೆ ಬೇಕಾದರೆ ಕರೆಯಿಸಿಕೊಳ್ಳಬೇಕು ಎಂದು ಸಚಿವ ಶೆಟ್ಟರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಕೈಗಾರಿಕೆಗಳನ್ನು ಆರಂಭಿಸುವ ಕುರಿತು ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು. ಸೂಕ್ತ ಮುನ್ನೆಚ್ಚರಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲಿಸಿ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹೆಚ್ಚುವರಿ ವೆಂಟಿಲೇಟರ್ ಪಡೆಯಲು ನಿರ್ದೇಶನ
ಈ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಗೋಕಾಕ ಬೆಂಗಳೂರು ಜಮಾತ್ ಜನ ಇರುವುದರಿಂದ ಆ ಭಾಗದಲ್ಲಿ ಸೋಂಕಿನ ಪ್ರಮಾಣ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಲಭ್ಯವಿರುವ ವೆಂಟಿಲೇಟರ್ ಜತೆಗೆ ಇನ್ನೂ ಹೆಚ್ಚಿನ ವೆಂಟಿಲೇಟರ್ ಪಡೆದುಕೊಳ್ಳಬೇಕು ಎಂದು
ಕ್ವಾರಂಟೈನ್ ನಲ್ಲಿ ಇರುವವರು ರಾತ್ರಿ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮದ್ಯ ಮಾರಾಟ ಬೇಡವೇ ಬೇಡ
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಸದ್ಯಕ್ಕೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರುವುದರಿಂದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆದ್ದರಿಂದ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವರೆಗೆ ಮಾರಾಟ ಆರಂಭಿಸಬಾರದು ಎಂದರು.
ಯಾವುದೇ ಒತ್ತಡಕ್ಕೂ ಮಣಿಯದೇ ಸೂಕ್ತ ವ್ಯವಸ್ಥೆ ಇರುವ ಹೋಟೆಲ್ ಗಳನ್ನು ಮಾತ್ರ ಕ್ವಾರಂಟೈನ್ ಗೆ ಪಡೆದುಕೊಳ್ಳಬೇಕು ಎಂದರು.
ಸಹಕಾರಿ ಬ್ಯಾಂಕುಗಳು ತೆರೆದು ಗ್ರಾಹಕರಿಗೆ ಸೇವೆ ಒದಗಿಸುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪಿಪಿಇ ಕಿಟ್ ಗಳನ್ನು ಕೂಡ ಹೆಚ್ಚುವರಿಯಾಗಿ ಪಡೆದುಕೊಳ್ಳಲು ಸಚಿವರು ಕ್ರಮವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಚೈನಾದಿಂದ ಒಟ್ಟಾರೆ ರಾಜ್ಯಕ್ಕೆ ಒಂದು ಲಕ್ಷ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗೂ ಆದೇಶ ನೀಡಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಒದಗಿಸಿರುವ ಕಿಟ್ ಗಳನ್ನು ಜಿಲ್ಲೆಗೆ ಪೂರೈಸಲು ಕೋರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದರು.
ಕ್ವಾರಂಟೈನ್ ನಲ್ಲಿ ಇರುವವರಲ್ಲಿ ಸೋಂಕು ದೃಢಪಟ್ಟಿದ್ದು, ಇದು ಸಮುದಾಯದಲ್ಲಿ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
ಪ್ರಾಥಮಿಕ ಸಂಪರ್ಕ ಕ್ಕೆ ಬಂದವರನ್ನು ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ 43 ಹೋಟೆಲ್ ಗಳನ್ನು ಪಡೆದುಕೊಂಡು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.
ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರನ್ನು ಅವರವರ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೋವಿಡ್-19 ನಿಯಂತ್ರಣಾ ಕ್ರಮಗಳ ಉಸ್ತುವಾರಿಯಾಗಿರುವ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪೊಲಿಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
Share