ಉಚಿತವಾಗಿ ವಿತರಿಸುತ್ತಿರುವ ನಂದಿನಿ ಹಾಲು ನಾಳೆಯಿಂದ ಏಪ್ರಿಲ್ 30 ರವರೆಗೆ ವಿಸ್ತರಣೆ

ಬೆಂಗಳೂರು : ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಅಧಿಸೂಚಿತ ಕೊಳಗೇರಿಗಳು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಪುನರ್‍ವಸತಿ ಶಿಭಿರಗಳ ನಿವಾಸಿಗಳಿಗೆ ಉಚಿತವಾಗಿ ವಿತರಿಸುತ್ತಿರುವ ನಂದಿನಿ ಹಾಲು ನಾಳೆಯಿಂದ ಏಪ್ರಿಲ್ 30 ರವರೆಗೆ ಅವಧಿಯನ್ನು ಮುಖ್ಯಮಂತ್ರಿಗಳು ವಿಸ್ತರಿಸಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ 7.75 ಲಕ್ಷ ಲೀ. ಹಾಲನ್ನು ಏ.30 ರವರೆಗೆ ಸರ್ಕಾರ ಉಚಿತವಾಗಿ ನೀಡಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಏ. 3 ರಿಂದ ರಾಜ್ಯದ ಎಲ್ಲ ನಗರಗಳಲ್ಲಿರುವ ಬಡ ಕುಟುಂಬಗಳು ಹಾಗೂ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಕೆಎಂಎಫ್‍ನಿಂದ ಪ್ರತಿದಿನ 7.75 ಲಕ್ಷ ಲೀ. ಹಾಲನ್ನು ಖರೀದಿಸಿಕೊಂಡು ಅದನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು, ಲಾಕ್‍ಡೌನ್ ಮುಂದುವರೆದ ಕಾರಣ ಮತ್ತೇ ಏ. 22 ರಿಂದ 30 ರವರೆಗೆ ಉಚಿತ ಹಾಲು ನೀಡಲು ಮುಖ್ಯಮಂತ್ರಿಗಳು ಆದೇಶವನ್ನು ಹೊರಡಿಸಿದ್ದಾರೆ ಎಂದು ಹೇಳಿದರು.
ಏ. 21 ರವರೆಗೆ ಹಾಲು ವಿಸ್ತರಣೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೇ ರಾಜ್ಯದ ಬಡ ಕುಟುಂಬಗಳ ಹಿತದೃಷ್ಟಿಯಿಂದ ಉಚಿತ ಹಾಲು ವಿತರಣೆಯನ್ನು ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಮನವಿ ಮಾಡಿಕೊಂಡಿದ್ದರಿಂದ, ತತ್‍ಕ್ಷಣವೇ ಹಾಲಿನ ಅವಧಿ ವಿಸ್ತರಣೆಗೆ ಈ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ರಾಜ್ಯದ ಬಡ ಕುಟುಂಬಗಳಿಗೆ ಹಾಗೂ ರೈತರಿಗೆ ತುಂಬಾ ಅನುಕೂಲವಾಗಲಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಾಲಿನ ಅವಧಿ ವಿಸ್ತರಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿರುವ ಸಮಸ್ತ ಹಾಲು ಉತ್ಪಾದಕರ ಪರವಾಗಿ ಬಾಲಚಂದ್ರ ಜಾರಕಿಹೊಳಿ ಕೃತಜ್ಞತೆ ಸಲ್ಲಿಸಿದ್ದಾರೆ.
25 ಲಕ್ಷ ರೂ. ಸಿಎಂ ನಿಧಿಗೆ : ಇದೇ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿ ಹಾಲು ಒಕ್ಕೂಟದಿಂದ 25 ಲಕ್ಷ ರೂ. ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
Share
WhatsApp
Follow by Email