ಜಾತ್ರೆಗೆ ಬಂದ ಜೇಕ ! ಮಾಲಿಕನ ಲೆಕ್ಕಾಚಾರ ತಲೆಕೆಳಗು ಮಾಡಿದ ಕೊರೊನಾ ! ಲಕ್ಷ್ಯಾಂತರ ನಷ್ಟದಲ್ಲಿ ಮಾಲೀಕ ! ಸಹಾಯಕ್ಕೆ ಮೊರೆ.

ವರದಿ : ಮೀರಾ.ಎಲ್.ತಟಗಾರ
ಮಹಾಲಿಂಗಪುರ : ಸಮೀಪದ ರನ್ನಬೆಳಗಲಿಯ ಬಂದಲಕ್ಷ್ಮೀ ಜಾತ್ರಗೆ ಬಂದ ಜೇಕು, ತೊಟ್ಟಿಲು, ಕುದುರೆ ಸವಾರಿ, ಮಕ್ಕಳ ಜಂಪಿAಗ್ ಸಲಕರಣೆಗಳ ಮಾಲಕರು ಮತ್ತು ಪರಿವಾರ ಲಾಕ್ ಡೌನ್ ನಿಂದ ಲಾಕ್ ಆಗಿ ತುತ್ತು ಕೂಳಿಗೂ ಪರದಾಡುವಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ಯುಗಾದಿಯ ನಂತರ ನಡೆಯುವ ಜಾತ್ರೆಯಲ್ಲಿ ಎಲ್ಲ ವಯೋಮಾನದವರ ಮೋಜು ಮಸ್ತಿಗಾಗಿ ದೊಡ್ಡ ತೊಟ್ಟಿಲು ಜೇಕು, ಕುದುರೆ ಸವಾರಿ, ಮಕ್ಕಳ ಜಂಪಿಂಗ್ ಹೀಗೆ ಹಲವಾರು ತರಹದ ಮನರಂಜನೆಯ ಸಹಸ್ರ ಸಹಸ್ರ ರೂಪಾಯಿಗಳ ಬಾಡಿಗೆ ನೀಡಿ ಪರಿಕರಗಳನ್ನು ಹೊತ್ತ ಚಡಚಣ ಊರಿನ ಗಾಳೆಪ್ಪ ಶಾಮರಾವ ಮಾಳವೆ ಅವರ ಒಟ್ಟು 15 ಜನರ ಪರಿವಾರ ಬಂದಿಳಿಯಿತು.
ಹೊಟ್ಟೆ ಹೊರೆಯುವ ಹಾಗೂ ಹೋಗು ಬರುವ 80 ಸಾವಿರ ಬಾಡಿಗೆ ಸಮೇತ ಮಾಡಿದ ಸಾಲ, ಬಡ್ಡಿ ಹರಿಯುವ ಲೆಕ್ಕಾಚಾರವನ್ನು ಹಾಕುತ್ತಾ ಈ ಜಾತ್ರೆ ತರುವಾಯ ಸೈದಾಪೂರ ಫ್ಯಾಕ್ಟರಿ, ಯಾದವಾಡ, ಗುಡೂರ ಜಾತ್ರೆಗಳನ್ನು ಮತ್ತು ಗಲಗಲಿ ಉರುಸ್ ಮುಗಿಸಿಕೊಂಡು ಹೋಗುವ ಲೆಕ್ಕಾಚಾರ ಹಾಕಿಕೊಂಡು ಬಂದ ಪರಿವಾರಕ್ಕೆ ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎನ್ನುವಂತಾಯಿತು.
ವಿಧಿಯ ವಿಪರ್ಯಾಸವೆನೋ ಕೆಲ ದಿವಸಗಳಲ್ಲಿಯೇ ವಿಶ್ವವನ್ನೆ ನಲುಗಿಸಿದ ಕೊರೊನಾ ರೋಗ ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಕಾರಣ ಅನಿವಾರ್ಯವಾಗಿ ಲಾಕ್ ಡೌನ್ ಜಾರಿಯಾಗಿ ತಿಂಗಳುಗಳು ಕಳೆಯುತ್ತಿವೆ. ಪರಿವಾರದಲ್ಲಿ ಮಾಡಿದ ಸಾಲ ಹಾಗೂ ಬಡ್ಡಿಯ ಆತಂಕ ಮನೆ ಮಾಡಿದ್ದು ನಮ್ಮ ಮುಂದಿನ ಭವಿಷ್ಯ ಹೇಗಪ್ಪ ಎಂದು ಚಿಂತಾಕ್ರಾಂತರಾಗಿದ್ದಾರೆ.
ತಿಂಗಳುಗಟ್ಟಲೆ ಲಕ್ಷಾಂತರ ಬೆಲೆ ಬಾಳುವ ಸಾಮಾನುಗಳು ಬಿದ್ದಲ್ಲಿಯೆ ಬಿದ್ದು ತುಕ್ಕು ಹಿಡಿದು ಮತ್ತು ಕೆಲಸವಿಲ್ಲದೆ ಮತ್ತಷ್ಟು ಹಣ ಕಳೆದುಕೊಳ್ಳುವ ಭೀತಿ ಕೂಡ ಆರಂಭವಾಗಿದೆ. ಅತ್ತ ಹೋಗಲು ಬಾರದು ಇತ್ತ ಇರಲು ಬಾರದು ಎಂಬ ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿದ್ದಾರೆ.
ಇದೇ ರೀತಿ ಲಾಕ್ ಡೌನ್ ಮುಂದುವರೆದರೆ ನಮ್ಮ ಪಾಡು ಹೇಳ ತೀರದು. ಇಲ್ಲಿಯ ಜನ ನಮಗೆ ಹೋಗಲು ಅನುವು ಮಾಡಿ ಕೊಟ್ಟರೆ ನಮ್ಮ ಗೂಡು ಸೇರುತ್ತೇವೆ ಎಂದು ಮಗ ಶಿವಾಜಿ ಹೇಳುತ್ತಾರೆ.
ತಿಂಗಳುಗಳು ಕಳೆದಿವೆ ಕೈಲಿಯಿದ್ದ ಅಲ್ಪಸ್ವಲ್ಪ ಹಣ ಆರಂಭದ ದಿನಗಳಲ್ಲಿಯೇ ಮುಗಿದು ಹೋಗಿದೆ.ಊಟಕ್ಕಾಗಿ ಕೆಲ ಜನ ಮನೆ ಮನೆಗೆ ಹೋಗಿ ಅಕ್ಕಿ,ಕಾಯಿಪಲ್ಲ್ಯೆ,ರೊಟ್ಟಿ,ಹೈನು ಇನ್ನಿತರೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಮತ್ತು ಪಟ್ಟಣ ಪಂಚಾಯಿತಿಯವರೂ ಕಿರಾಣ ಸಾಮಗ್ರಿಗಳನ್ನು ಕೊಟ್ಟು ಸಹಾಯ ಮಾಡಿದ್ದಾರೆ.
ವಿಶೇಷವೆನೆಂದರೆ ಹೆಣ್ಣು ಮಕ್ಕಳು ಹುಣ ್ಣಮೆ,ಅಮಾವಾಸ್ಯೆಯಂದು ಗುಡಿಗೆ ನೈವೇದ್ಯಗೆಂದು ತರುವ ತುಪ್ಪ ಸಮೇತ ಹೋಳಗಿ, ಚಪಾತಿ, ಕಡುಬು,ಅನ್ನ, ಸಾರು ಕೊಟ್ಟು ನಮ್ಮ ಹಸಿವು ನೀಗಿಸುತಿದ್ದಾರೆ ಪುಣ್ಯಾತ್ಮರು ಎಂದು ಜೇಕ್ ಮಾಲಿಕ ಗಾಳಪ್ಪ ಊರಿನ ಜನತೆಯ ಉಪಕಾರ ನೆನೆಯುತ್ತಾರೆ.
ಬಾಕ್ಸ್ ನ್ಯೂಸ್ :
ಶಿವಾಜಿ ಗಾಳೆಪ್ಪ ಮಾಳವೆ , ಮಾಲಿಕರು.
ಊರಿನ ಜನ ನೀಡಿದ ಆಹಾರ ಪದಾರ್ಥಗಳು ಮುಗಿದುಹೋಗಿವೆ. ನಮ್ಮ ಕೈಯಲ್ಲಿಯೂ ಕೂಡ ಹಣ ಖಾಲಿಯಾಗಿದ್ದು ಮತ್ತೆ ಮತ್ತೆ ಊರಿನ ಜನತೆಯನ್ನು ಕೇಳಿ ಅವರಿಗೆ ಭಾರವಾಗುವುದಕ್ಕೆ ನಮ್ಮ ಮನಸ್ಸು (ಸ್ವಾಭಿಮಾನ) ಒಪ್ಪುತ್ತಿಲ್ಲ.ಆದಷ್ಟು ಬೇಗ ನಮ್ಮೂರಿಗೆ ಹೋಗಲು ಜನತೆ ಸಹಕರಿಸಿದರೆ ಸಾಕು.ಸಣ್ಣ ಮಕ್ಕಳು ಊರ ಕಡೆಗೆ ನೆನಪು ಮಾಡಿ ಅಳುತ್ತಿವೆ.
ಬಾಕ್ಸ್ ನ್ಯೂಸ್ : ವಿಧ್ಯಾಧರ ಕಲಾದಗಿ. ಮುಖ್ಯಾಧಿಕಾರಿ ಬೆಳಗಲಿ ಪಟ್ಟಣ ಪಂಚಾಯತ.
ಈಗಾಗಲೆ ಆ ಪರಿವಾರಕ್ಕೆ ಅಕ್ಕಿ ಹಾಗೂ ಕಿರಾಣ ಸಾಮಾನುಗಳನ್ನು ಒದಗಿಸಿದ್ದೇವೆ.ಇನ್ನೂ ಅವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲಾಗುವುದು.