ಕೊರೊನಾ: ಮಾಧ್ಯಮ ಪ್ರತಿನಿಧಿಗಳಿಗೆ ರೋಗ ಪ್ರತಿಬಂಧಕ ಆರ್ಸೆನಿಕಮ್ ಆಲ್ಬಮ್ ಮಾತ್ರೆ ವಿತರಣೆ

ಕೊರೊನಾ: ಮಾಧ್ಯಮ ಪ್ರತಿನಿಧಿಗಳಿಗೆ ರೋಗ ಪ್ರತಿಬಂಧಕ ಆರ್ಸೆನಿಕಮ್ ಆಲ್ಬಮ್ ಮಾತ್ರೆ ವಿತರಣೆ

ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ಸಂಬoಧಿಸಿದoತೆ ಜನಜಾಗೃತಿ ಮೂಡಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಆಯುಷ್ ಇಲಾಖೆಯಿಂದ ಅನುಮೋದಿತ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಎಂಬ ಮಾತ್ರೆಗಳನ್ನು ವಿತರಿಸಲಾಯಿತು.
ಭರತೇಶ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಶಿವಬಸವ ಜ್ಯೋತಿ ಹೋಮಿಯೋಪಥಿ ಮಹಾವಿದ್ಯಾಲಯ, ಎ.ಎಂ.ಶೇಖ್ ಹೋಮಿಯೋಪಥಿ ಮಹಾವಿದ್ಯಾಲಯ ಹಾಗೂ ಕೆ.ಎಲ್.ಇ.ಹೋಮಿಯೋಪಥಿ ಮಹಾವಿದ್ಯಾಲಯ, ಜಿಲ್ಲಾ ಆಯಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹೋಮಿಯೋಪಥಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಮಾತ್ರೆಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಲ್.ಇ. ಹೋಮಿಯೋಪಥಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಎಸ್.ಎಮ್.ಉಡಚಣಕರ ಅವರು, “ಕೊರೊನಾ ರೋಗಕ್ಕೆ ಇನ್ನೂ ಲಸಿಕೆ ತಯಾರಾಗಿಲ್ಲ .ಆದ್ದರಿಂದ ಈ ರೋಗನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ನಮ್ಮಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಿಕೊಳ್ಳುವುದು” ಎಂದರು.
ಆಯುಷ್ ಇಲಾಖೆಯ ಅನುಮೋದಿತ ಹೋಮಿಯೋಪಥಿ ಆರ್ಸೆನಿಕಮ್ ಆಲ್ಬಮ್-30 ಮಾತ್ರೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಮಾಧ್ಯಮ ಪ್ರತಿನಿಧಿಗಳು ಕೂಡ ಈ ಮಾತ್ರೆಗಳನ್ನು ಸೇವಿಸುವ ಮೂಲಕ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮಾತ್ರೆ ಸೇವಿಸುವ ವಿಧಾನ:
ಆರ್ಸೆನಿಕಮ್ ಆಲ್ಬಮ್-30 ಮಾತ್ರೆಗಳನ್ನು ವಯಸ್ಕರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆರು ಮಾತ್ರೆಗಳನ್ನು ಮೂರು ದಿನಗಳವರೆಗೆ ತೆಗೆದುಕೊಳ್ಳಬೇಕು. ಅದೇ ರೀತಿ ಮಕ್ಕಳು ಮೂರು ದಿನಗಳವರೆಗೆ ಮಾತ್ರೆಗಳನ್ನು ಸೇವಿಸಬೇಕು ಎಂದು ಪ್ರಾಚಾರ್ಯ ಡಾ. ಎಸ್.ಎಮ್.ಉಡಚಣಕರ ಅವರು ತಿಳಿಸಿದರು. ಭರತೇಶ ಹೋಮಿಯೋಪಥಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶ್ರೀಕಾಂತ ಕೊಂಕಣಿ ಅವರು ಮಾತನಾಡಿ , ಬೆಳಗಾವಿಯಲ್ಲಿ ಕೊರೊನಾ ಸೋಂಕಿನ ವಿರುದ್ದ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳಾದ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರಿಗೆ ಈ ರೋಗ ನಿರೋಧಕ ಶಕ್ತಿ ವೃದ್ದಿಸುವ ಮಾತ್ರೆಗಳನ್ನು ನೀಡಲಾಗಿದೆ. ಇದೀಗ ಪತ್ರಕರ್ತರಿಗೆ ಈ ಮಾತ್ರೆಗಳನ್ನು ವಿತರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೂ ಈ ಮಾತ್ರೆಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಶಿವಬಸವ ಜ್ಯೋತಿ ಹೋಮಿಯೋಪಥಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಆನಂದ ಹೊಸುರ, ಎ.ಎಮ್.ಶೇಖ್ ಹೋಮಿಯೋಪಥಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಮೂಗಿ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ದೊಡವಾಡ, ಡಾ. ಸುಣಧಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ನಿರ್ದೇಶಕ ಗುರುನಾಥ ಕಡಬೂರ ಮತ್ತಿತರರು ಉಪಸ್ಥಿತರಿದ್ದರು. ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಶನ್ ಆಫ್ ಇಂಡಿಯಾ ಬೆಳಗಾವಿ ವಿಭಾಗದ ಅಧ್ಯಕ್ಷ ಡಾ.ಬಸವರಾಜ ಆದಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ 40 ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳಿಗೆ ಆರ್ಸೆನಿಕಮ್ ಆಲ್ಬಮ್- 30 ಮಾತ್ರೆಗಳನ್ನು ವಿತರಿಸಲಾಯಿತು.
Share