ಎರಡು ತಿಂಗಳು ಸಮಯವಿದೆ, ಆರಾಮಾಗಿ ಆದಾಯ ತೆರಿಗೆ ಸಲ್ಲಿಸಿ : ಕೇಂದ್ರ ಸರ್ಕಾರ

ಎರಡು ತಿಂಗಳು ಸಮಯವಿದೆ, ಆರಾಮಾಗಿ ಆದಾಯ ತೆರಿಗೆ ಸಲ್ಲಿಸಿ : ಕೇಂದ್ರ ಸರ್ಕಾರ

ಪ್ರತಿಯೊಬ್ಬ ತೆರಿಗೆದಾರರು ಕೊರೋನಾ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಿಂದ ತೆರಿಗೆದಾರರಿಗೆ ಕೊಂಚಮಟ್ಟಿಗೆ ರಿಲೀಫ್ ನೀಡುವ ಕಾರಣ ಕೆಲವು ತೆರಿಗೆ ನಿಯಮಗಳ ಅನುಸರಣೆಯಲ್ಲಿ ವಿಸ್ತರಣೆ ನೀಡಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಆದಾಯ ತೆರಿಗೆ ಪಾವತಿಯ (Income Tax Returns) ಅರ್ಜಿ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ 2 ತಿಂಗಳು ಕಾಲ ವಿಸ್ತರಿಸಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.ಉದ್ಯೋಗ ಸಂಸ್ಥೆಗಳಿಗೆ ಉದ್ಯೋಗಿಗಳು ಸಲ್ಲಿಸುವ ಫಾರ್ಮ್ 16 ಅವಧಿಯನ್ನು ಜುಲೈ 15, 2021, ವೈಯಕ್ತಿಕವಾಗಿ ಐಟಿಆರ್ ಸಲ್ಲಿಸುವ ವ್ಯಕ್ತಿಗಳಿಗೆ ಸೆಪ್ಟೆಂಬರ್ 30, 2021ರವರೆಗೆ, ಇನ್ನು ಕಂಪೆನಿಗಳು ಸಲ್ಲಿಸುವ ಐಟಿಆರ್ ಅರ್ಜಿ ಸಲ್ಲಿಕೆಗೆ ನವೆಂಬರ್ 30,2021ರವರೆಗೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿಯೊಬ್ಬ ತೆರಿಗೆದಾರರು ಕೊರೋನಾ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಿಂದ ತೆರಿಗೆದಾರರಿಗೆ ಕೊಂಚಮಟ್ಟಿಗೆ ರಿಲೀಫ್ ನೀಡುವ ಕಾರಣ ಕೆಲವು ತೆರಿಗೆ ನಿಯಮಗಳ ಅನುಸರಣೆಯಲ್ಲಿ ವಿಸ್ತರಣೆ ನೀಡಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ಸಲ್ಲಿಸುವ ವ್ಯಕ್ತಿಗಳು ಜುಲೈ 31ರೊಳಗೆ ಐಟಿಆರ್ ಸಲ್ಲಿಸಬೇಕಾಗಿತ್ತು. ಇನ್ನು ಲೆಕ್ಕಪರಿಶೋಧನೆಗೆ ಒಳಪಡುವ ಕಂಪೆನಿಗಳು, ಸಂಸ್ಥೆಗಳು ನವೆಂಬರ್ 30ರೊಳಗೆ ಐಟಿಆರ್ ಸಲ್ಲಿಸಬೇಕಾಗಿತ್ತು. ಇದೀಗ ಐಟಿ ರಿಟರ್ನ್‍ಗೆ ಸಂಬಂಧಿಸಿದ ಎಲ್ಲಾ ಗಡುವನ್ನು ವಿಸ್ತರಿಸಿದೆ.

ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಸಲ್ಲಿಸುವ http://incometax.gov.in ಎಂಬ ಹೊಸ ಆನ್‍ಲೈನ್ ವ್ಯವಸ್ಥೆಯನ್ನು ಜೂನ್ 7ರಂದು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಐಟಿಡಿ ಪೋರ್ಟಲ್ http://incometaxindiaefiling.gov.in ಈ ವ್ಯವಸ್ಥೆಯನ್ನು ತೆಗೆದುಹಾಕಿ ಹೊಸ ವ್ಯವಸ್ಥೆ ಮಾಡಿದೆ. ಹಾಗಾಗಿ ತೆರಿಗೆದಾರರು / ಇತರ ಮಧ್ಯಸ್ಥಗಾರರಿಗೆ ಜೂನ್ 1ರಿಂದ 6 ರವರೆಗೆ ಎಂದರೆ ಸತತ 6 ದಿನಗಳವರೆಗೆ ಆನ್‍ಲೈನ್ ವ್ಯವಸ್ಥೆ ಲಭ್ಯವಿರುವುದಿಲ್ಲ ಎಂದು ಆದಾಯ ಇಲಾಖೆ ಮಾಹಿತಿ ನೀಡಿದೆ.

ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಟ್ರಾನ್ಸ್‌ಫರ್‌ ಪ್ರೈಸಿಂಗ್ ಸರ್ಟಿಫಿಕೇಟ್ ಸಲ್ಲಿಸುವ ದಿನಾಂಕವನ್ನು ಕ್ರಮವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ವಿಳಂಬಿತ ಅಥವಾ ಆದಾಯದ ಪರಿಷ್ಕೃತ ಆದಾಯವನ್ನು ಸಲ್ಲಿಸಲು, ಇದೀಗ ಅಂತಿಮ ದಿನಾಂಕ ಜನವರಿ 31, 2022. ಅಲ್ಲದೆ, ಹಣಕಾಸು ಸಂಸ್ಥೆಗಳಿಗೆ ಹಣಕಾಸು ವಹಿವಾಟು ವರದಿ (ಎಸ್‍ಎಫ್‍ಟಿ) ನೀಡುವ ಗಡುವನ್ನು ಮೇ 31 ರಿಂದ ಜೂನ್ 30 2021 ರವರೆಗೆ ವಿಸ್ತರಿಸಲಾಗಿದೆ.

ಅಲ್ಲದೇ ಯಾವ ತೆರಿಗೆದಾರರ ಆದಾಯ ತೆರಿಗೆಯ ಸಂಪೂರ್ಣ ಹೊಣೆಗಾರಿಕೆ ಹೊಂದಿರುತ್ತಾರೋ ಆ ತೆರಿಗೆದಾರರ ಟಿಡಿಎಸ್ ಮತ್ತು ಮುಂಗಡ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಇದು ಒಂದು ಲಕ್ಷಕ್ಕಿಂತ ಹೆಚ್ಚಿದ್ದರೆ, ಅವರು ಬಡ್ಡಿ ಶುಲ್ಕದಿಂದ ತಪ್ಪಿಸಿಕೊಳ್ಳಬೇಕಾದರೆ ಆಯಾ ಮೂಲ ದಿನಾಂಕದೊಳಗೆ ತಮ್ಮ ಐಟಿಆರ್‌ ಅನ್ನು ಸಲ್ಲಿಸಲು ಪ್ರಯತ್ನಿಸಬೇಕು. ಅಕಸ್ಮಾತ್ ಸಲ್ಲಿಸಿದರೆ ಐಟಿಆರ್ ಅನ್ನು ಸಲ್ಲಿಸಬೇಕಾದ ಮೂಲ ದಿನಾಂಕದ ಪ್ರತಿ ತಿಂಗಳ ನಂತರ ಶೇ. 1 ರಷ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ನಂಗಿಯಾ ಮತ್ತು COOLPಯ ಪಾಲುದಾರ ಶೈಲೇಶ್ ಕುಮಾರ್ ಹೇಳಿದರು.

ಸಿಬಿಡಿಟಿ 2020-21ರ ಹಣಕಾಸು ವರ್ಷದಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಸಲು ಏಪ್ರಿಲ್ 1 ರಂದು ಅಧಿಸೂಚನೆ ನೀಡಲಾಗಿತ್ತು ಮತ್ತು ಕೊರೋನಾದಿಂದ ಉಂಟಾಗುತ್ತಿರುವ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ತೆರಿಗೆದಾರರಿಗೆ ಅನುಕೂಲವಾಗುವಂತೆ ಕಳೆದ ವರ್ಷದ ಐಟಿಆರ್ಗೆ‌ ಹೋಲಿಸಿದರೆ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಿಲ್ಲ ಎಂದು ಹೇಳಿದರು.

ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿದ ವ್ಯವಹಾರಗಳಿಗೆ ಹಾಗೂ ವ್ಯವಹಾರಸ್ಥರ ಹೊರೆಯನ್ನು ಐಟಿ ರಿಟರ್ನ್ ದಿನಾಂಕ ವಿಸ್ತರಣೆಯು ಕೊಂಚ ನೆಮ್ಮದಿ ನೀಡಿದೆ. ಜೊತೆಗೆ ವ್ಯವಹಾರಗಳು ಸಂಪೂರ್ಣವಾಗಿ ಆನ್‍ಲೈನ್ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಎಷ್ಟು ಕ್ಲಿಷ್ಟಕರ ಎಂಬುದನ್ನು ಸಹ ನಿರ್ಣಯಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಕೋವಿಡ್ ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಸರಿಯಾದ ಆದಾಯ ಗಳಿಕೆಯು ಇಲ್ಲದ ಕಾರಣ ಈ ದಿನಾಂಕ ವಿಸ್ತರಣೆಯಿಂದ ತೆರಿಗೆದಾರರು ನೆಮ್ಮದಿಂದ ಉಸಿರಾಡುವಂತಾಗಿದೆ ಎಂದು ಕ್ಲಿಯರ್‌ ಟ್ಯಾಕ್ಸ್‌ನ ಸ್ಥಾಪಕ ಮತ್ತು ಸಿಇಒ ಅರ್ಚಿತ್‌ ಗುಪ್ತಾ ಹೇಳಿದರು.

2020-21ರ ಹಣಕಾಸು ವರ್ಷದಲ್ಲಿ, ಐ-ಟಿ ಕಾಯ್ದೆಯ ಸೆಕ್ಷನ್ 115 ಬಿಎಸಿ ಅಡಿಯಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಸರ್ಕಾರ ತೆರಿಗೆದಾರರಿಗೆ ನೀಡಿತ್ತು. ಹೊಸ ತೆರಿಗೆ ಕಾಯ್ದೆ ಅಡಿಯಲ್ಲಿ 2.5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. 2.5 ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಗಳಿಸುವ ವ್ಯಕ್ತಿಗಳು ಶೇಕಡಾ 5 ರಷ್ಟು ತೆರಿಗೆಯನ್ನು ಪಾವತಿಸಬೇಕು. 5 ರಿಂದ 7.5 ಲಕ್ಷ ರೂ.ಗಳವರೆಗಿನವರು ಶೇಕಡಾ 10 ರಷ್ಟು ತೆರಿಗೆ ವಿಧಿಸಿದರೆ, ಇನ್ನು 7.5 ರಿಂದ 10 ಲಕ್ಷ ರೂ ಆದಾಯ ಹೊಂದಿರುವವರು ಶೇಕಡಾ 15ರಷ್ಟು ತೆರಿಗೆ ಪಾವತಿಸಬೇಕು. 10 ರಿಂದ 12.5 ಲಕ್ಷ ರೂ.ಗಳವರೆಗೆ ಆದಾಯ ಗಳಿಸುವವರು ಶೇಕಡಾ 20 ದರದಲ್ಲಿ ತೆರಿಗೆ ಪಾವತಿಸಿದರೆ, 12.5 ರಿಂದ 15 ಲಕ್ಷ ರೂ.ಗಳವರೆಗಿನವರು ಶೇಕಡಾ 25 ದರದಲ್ಲಿ ಪಾವತಿಸುತ್ತಾರೆ. 15 ಲಕ್ಷ ರೂ. ಗಿಂತ ಹೆಚ್ಚಿನ ಆದಾಯವನ್ನು ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗುತ್ತದೆ.

Share