ಕೊರೊನಾ: ಕರ್ನಾಟಕದಲ್ಲಿ 40 ಸಾವಿರ ಮಕ್ಕಳಿಗೆ ಕೊವಿಡ್ ಪಾಸಿಟಿವ್!

ಬೆಂಗಳೂರು, ಮೇ 21: ಕರ್ನಾಟಕದಲ್ಲಿ ಕೊರೊನಾವೈರಸ್ ಮಕ್ಕಳಿಗೆ ಅಂಟಿಕೊಳ್ಳುತ್ತಿರುವ ಆತಂಕ ಹೆಚ್ಚಿಸುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ 40,000ಕ್ಕೂ ಹೆಚ್ಚು ಮಕ್ಕಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಕಳೆದ ಮಾರ್ಚ್ 18ರಿಂದ ಇತ್ತೀಚಿನ ಎರಡು ತಿಂಗಳಿನಲ್ಲಿ 0-9 ವಯೋಮಾನದ ಶೇ.143ರಷ್ಟು ಮಕ್ಕಳಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 10-19 ವಯೋಮಾನದ ಮಕ್ಕಳಲ್ಲಿ ಶೇ.160ರಷ್ಟು ಕೊವಿಡ್-19 ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ಮಾರ್ಚ್ 18 ರಿಂದ ಮೇ 18ರವರೆಗಿನ ವಾರ್ ರೂಮ್ ಅಂಕಿ-ಅಂಶಗಳ ಪ್ರಕಾರ, 0-9 ವರ್ಷದ 39,846 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 10-19 ವರ್ಷದ 1,05,044 ಮಕ್ಕಳಿಗೆ ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭಗೊಂಡು ಇತ್ತೀಚಿನ ಮಾರ್ಚ್ ತಿಂಗಳವರೆಗೆ 0-9 ವರ್ಷದ 27,841 ಹಾಗೂ 10-19 ವರ್ಷದ 65,551 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು.

ಕೊರೊನಾವೈರಸ್ ಬಲಿ ತೆಗೆದುಕೊಂಡ ಮಕ್ಕಳ ಸಂಖ್ಯೆ ಎಷ್ಟು? ಕರ್ನಾಟಕದಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಮಕ್ಕಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭವಾಗಿ 2021 ಮಾರ್ಚ್ 18ರವರೆಗೆ 28 ಮಕ್ಕಳು ಮೃತಪಟ್ಟಿದ್ದು, ಅಲ್ಲಿಂದ ಮೇ ತಿಂಗಳವರೆಗೆ 15 ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ಮಕ್ಕಳ ಸಂಖ್ಯೆ 46 ರಿಂದ 62ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಕೂಡ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಮಕ್ಕಳಿಗೆ ಅಂಟಿದರೆ ಇಡೀ ಕುಟುಂಬಕ್ಕೆ ಕೊವಿಡ್-19 ಭೀತಿ ರಾಜ್ಯದ ಕೆಲವು ಪ್ರಕರಣಗಳಲ್ಲಿ ಮಕ್ಕಳು ಕೊರೊನಾವೈರಸ್ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕವನ್ನು ಹೊಂದಿರುತ್ತಾರೆ. ಇನ್ನು ಕೆಲವೆಡೆ ಮಕ್ಕಳಲ್ಲೇ ಮೊದಲು ಕೊವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಅಂಥ ಮಕ್ಕಳಿಂದ ಇಡೀ ಕುಟುಂಬಕ್ಕೆ ಮಹಾಮಾರಿ ಹರಡುವ ಅಪಾಯ ಹೆಚ್ಚಾಗಿರುತ್ತದೆ. ಒಂದು ಕುಟುಂಬ ಒಬ್ಬ ವ್ಯಕ್ತಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಎರಡು ದಿನಗಳಲ್ಲಿ ಇಡೀ ಕುಟುಂಬಕ್ಕೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಮಕ್ಕಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡರೆ ಕುಟುಂಬ ಸದಸ್ಯರೆಲ್ಲ ಜಾಗೃತಿ ವಹಿಸಬೇಕಾಗುತ್ತದೆ. ಸೋಂಕಿನ ಮಗುವಿನ ಜೊತೆಗೆ ಅವರ ಸಹಾಯಕರು ಕೂಡಾ ಐಸೋಲೇಟ್ ಆಗುವುದು ತೀರಾ ಅವಶ್ಯವಾಗಿರುತ್ತದೆ ಎಂದು ಡಾ.ಶ್ರೀನಿವಾಸ್ ಸಲಹೆ ನೀಡುತ್ತಾರೆ.

ಶೇ.10ರಷ್ಟು ಸೋಂಕಿತ ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲು ಕೊರೊನಾವೈರಸ್ ಸೋಂಕು ತಗುಲಿದ 10 ಮಕ್ಕಳಲ್ಲಿ ಒಂದು ಸೋಂಕಿತ ಮಗು ಮಾತ್ರ ಆಸ್ಪತ್ರೆಗೆ ದಾಖಲಾಗುವಂತಾ ಸ್ಥಿತಿಯಲ್ಲಿದೆ. ಉಳಿದ ಶೇ.90ರಷ್ಟು ಸೋಂಕಿತ ಮಕ್ಕಳನ್ನು ಗೃಹ ದಿಗ್ಬಂಧನದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಮಕ್ಕಳ ತಜ್ಞ ಡಾ. ಸುಪ್ರಾಜ್ ಚಂದ್ರಶೇಖರ್ ತಿಳಿಸಿದ್ದಾರೆ. ಜ್ವರ, ಕೆಮ್ಮು, ವಾಂತಿ ಮತ್ತು ಬೇಧಿಯ ಲಕ್ಷಣಗಳು ಕಂಡು ಬರುವ ಮಕ್ಕಳನ್ನು ಕಡ್ಡಾಯವಾಗಿ ಕೊರೊನಾವೈರಸ್ ಸೋಂಕಿನ ಪರೀಕ್ಷೆಗೊಳಪಡಿಸಬೇಕು. ವೈದ್ಯರ ಸಲಹೆ ಇಲ್ಲದೇ ಮಕ್ಕಳನ್ನು ಯಾವುದೇ ಕಾರಣಕ್ಕೂ ಸಿಟಿ ಸ್ಕ್ಯಾನ್, ಡಿ-ಡಿಮ್ಮರ್ ಟೆಸ್ಟ್ ಅಥವಾ ರಕ್ತ ಪರೀಕ್ಷೆಗೆ ಒಳಪಡಿಸುವಂತಿಲ್ಲ ಎಂದು ಡಾ.ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯದಲ್ಲಿ ವರದಿಯಾದ ಕೊವಿಡ್-19 ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 28,869 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ ಕೊವಿಡ್-19 ಸೋಂಕಿನಿಂದ 548 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 52257 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು 23,35,524 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 17,76,695 ಸೋಂಕಿತರು ಗುಣಮುಖರಾಗಿದ್ದು, 23,854ಕ್ಕೆ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 5,34,954 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

ರಾಜ್ಯದಲ್ಲಿ ಒಟ್ಟು 28,869 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 451, ಬಳ್ಳಾರಿ 1109, ಬೆಳಗಾವಿ 948, ಬೆಂಗಳೂರು ಗ್ರಾಮಾಂತರ 678, ಬೆಂಗಳೂರು 9409, ಬೀದರ್ 94, ಚಾಮರಾಜನಗರ 541, ಚಿಕ್ಕಬಳ್ಳಾಪುರ 487, ಚಿಕ್ಕಮಗಳೂರು 945, ಚಿತ್ರದುರ್ಗ 568, ದಕ್ಷಿಣ ಕನ್ನಡ 926, ದಾವಣಗೆರೆ 538, ಧಾರವಾಡ 955, ಗದಗ 469, ಹಾಸನ 273, ಹಾವೇರಿ 321, ಕಲಬುರಗಿ 399, ಕೊಡಗು 439, ಕೋಲಾರ 357, ಕೊಪ್ಪಳ 725, ಮಂಡ್ಯ 734, ಮೈಸೂರು 1879, ರಾಯಚೂರು 633, ರಾಮನಗರ 480, ಶಿವಮೊಗ್ಗ 719, ತುಮಕೂರು 1796, ಉಡುಪಿ 809, ಉತ್ತರ ಕನ್ನಡ 582, ವಿಜಯಪುರ 310, ಯಾದಗಿರಿ 295 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Share