ನಿರೀಕ್ಷೆ ನಿರಾಶೆಯ ತಾಯಿಬೇರು?

   ಪ್ರತಿ ಮಾನವನ ಅತ್ಯಂತ ಸಹಜ ಸ್ವಭಾವವೆಂದರೆ ನಿರೀಕ್ಷೆ.ಇದರ ಫಲವಾಗಿ ಹುಟ್ಟಿಕೊಳ್ಳುವುದೇ ಮನೋವ್ಯಾಧಿಗೆ ಕಾರಣವಾಗುವ ನಿರಾಸೆ. ನಮ್ಮ ಸಣ್ಣ ಸಾಧನೆಯನ್ನೂ ಜನ ಗಮನಿಸಬೇಕು ಮತ್ತು ಬೆನ್ನುತಟ್ಟಬೇಕು ಎಂದು ನಿರೀಕ್ಷಿಸುತ್ತೇವೆ.ನಾವು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಅವರಿಂದಲೂ ಏನನ್ನೋ ನಿರೀಕ್ಷೆ ಮಾಡುತ್ತೇವೆ.ಕಡಿಮೆ ಶ್ರಮ ವಿನಿಯೋಗದಲ್ಲೂ ಉತ್ತಮ ಸಾಧನೆಯ ಪಲಿತಾಂಶ ನಮ್ಮದಾಗಬೇಕೆಂದುಕೊಳ್ಳುತ್ತೇವೆ, ನಾನು ನಿರೀಕ್ಷಿಸಿದಂತೆ ಎಲ್ಲರೂ ನನ್ನೊಂದಿಗೆ ವರ್ತಿಸಬೇಕು .ಒಂದೇ,ಎರಡೇ ಹೀಗೆಯೇ ನೂರಾರು, ಸಾವಿರಾರು ನಿರೀಕ್ಷೆಗಳ ಮಹಾಪೂರ ನಮ್ಮ ಮನಸ್ಸಿನಲ್ಲಿರುತ್ತದೆ. ಇದು ತಪ್ಪಲ್ಲ ಬಿಡಿ ಆದರೆ,ನಾವು ಅಂದುಕೊಂಡಂತೆ ಇಲ್ಲವೇ ನಿರ್ಧರಿಸಿದಂತೆಯೇ ಜೀವನ ನಡೆಯೋ ಹಾಗಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು.ಜೀವನ ಅಂದ್ರೆ ಅನಿರೀಕ್ಷತೆಗಳ ಅಂತರಿಕ್ಷ. 

       ನಾವಂದುಕೊಂಡಿರುವುದಕ್ಕಿಂತ ವಿಭಿನ್ನ ರೀತಿಯ ಅನಿರೀಕ್ಷಿತ ತಿರುವುಗಳು ಇಲ್ಲಿರುತ್ತವೆ. ವಾಸ್ತವ ಹೀಗಿರುವಾಗ ನಾವು ಇಟ್ಟುಕೊಂಡಿರುವ ನೂರಾರು ನಿರೀಕ್ಷೆಗಳು ಈಡೇರದೇ ಹೋದಾಗ ವಿಚಲಿತರಾಗುತ್ತೇವೆ.ಅವು ನಂತರ ನಿರಾಸೆಗಳಾಗಿ ಮಾರ್ಪಾಡಾಗಿ ಮನಸ್ಸಿನ ಅಚಲ ಮತ್ತು ನಿರ್ಮಲ ಚಿತ್ತವನ್ನು ಕಲಕುತ್ತವೆ ಮತ್ತೆ ರಾಡಿಯಾಗಿಸುತ್ತವೆ.ಆಗ ಶಾಂತಿ,ನೆಮ್ಮದಿ ಮತ್ತು ಸಂತೋಷಗಳು ಕ್ಷಣಾರ್ಧದಲ್ಲಿ ನಮ್ಮಿಂದ ದೂರವಾಗಿ ಬಿಡುತ್ತವೆ.

   ನಾವಿಲ್ಲಿ ಚರ್ಚಿಸುತ್ತಿರುವ ನಿರೀಕ್ಷೆ ಮತ್ತು ನಿರಾಶೆ ಎಂಬ ಎರಡು ಸಂಗತಿಗಳು,ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ನಡೆದಿರುವಂತಹ ಗಳವೇ ಅಲ್ಲವೇ??? ಅತಿಯಾದ ನಿರೀಕ್ಷೆ ಮತ್ತು ಅವುಗಳಿಂದ ಉಂಟಾದ ನಿರಾಸೆಗಳೇ ಮನಸ್ಸಿನ ಸರ್ವ ಕಾಯಿಲೆಗಳ ಮೂಲ ಹೇತು ಎಂಬುದು ಸತ್ಯ.ಇದು ಯಾರಿಗೆ ಗೊತ್ತಿಲ್ಲ ಹೇಳಿ?ಎಲ್ಲರಿಗೂ ಗೊತ್ತಿದೆ ತಾನೇ ಆದರೂ ಸಹ ಎಲ್ಲರೂ ಯಾಕ್ರೀ ಎಷ್ಟೊಂದು ಸಲ ಈ ರೋಗಕ್ಕೆ ಒಳಗಾಗುತ್ತೇವೆ. ನೆಗಡಿಯಂತಹ ಸಾಮಾನ್ಯ ಕಾಯಿಲೆ ಹತ್ತಿರ ಸುಳಿಯದಂತೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವ ನಾವು ಮನದ ಮಹಾ ವ್ಯಾಧಿಗೆ ಯಾಕೆ ಎಷ್ಟೊಂದು ತಾತ್ಸಾರ ಭಾವನೆ ತಳೆಯುತ್ತೇವೆ.????

ನಿರೀಕ್ಷೆ ರಹಿತ ಜೀವನ ನೀರಸ ಎಂಬ ಮೊಂಡುವಾದವನ್ನು ಕೂಡ ಕೆಲವರು ಮಾಡುತ್ತಾರೆ. ಹೌದು ಸ್ನೇಹಿತರೇ ಅವರ ವಾದದಲ್ಲಿಯೂ ನೈಜತೆ ಇಲ್ಲವೆಂದಲ್ಲ.ಮನುಷ್ಯನಾಗಿ ಹುಟ್ಟು ಪಡೆದ ಪ್ರತಿ ವ್ಯಕ್ತಿ ನಾಳೆಯ ಸುಂದರ ಜೀವನದ ನಿರೀಕ್ಷೆಯಲ್ಲಿ ಬದುಕ ಬಂಡಿಯ ಎಳೆಯಲೆತ್ನಿಸಲೇಬೇಕು. ಆದರಿಲ್ಲಿ ನಾನು ಹೇಳ್ತಾ ಇರೋದು ಅತಿಯಾದ ನಿರೀಕ್ಷೆ ಬಗ್ಗೆ ‌. ಬೇರೆಯವರಿಂದ ನಾವು ನಿರೀಕ್ಷಿಸುವ ಅತಿಯಾದ ಪ್ರೀತಿ,ಕಾಳಜಿ,ಹೊಗಳಿಕೆ ಮತ್ತು ಸನ್ಮಾನಗಳು ಖಂಡಿತ ನಮ್ಮನ್ನೊಮ್ಮೆ ನಿರಾಸೆಯ ಆಳ ಕೂಪಕ್ಕೆ ದೂಡಿ ಬಿಡುತ್ತವೆ. ತಪ್ಪಿ ನೀವೇನಾದರೂ ಒಂದು ಬಾರಿ ಈ ಪ್ರಪಾತಕ್ಕೆ ಬಿದ್ದಿರೋ ನಿಮ್ಮ ಇಡೀ ಜೀವನ, ನರಕವಾಗುವುದರಲ್ಲಿ ಸಂಶಯವೇ ಇಲ್ಲ.

ಅಯ್ಯೋ!ನಾನೆಷ್ಟು ಒಳ್ಳೆ ಕೆಲಸ ಮಾಡಿದರೂ ಬಾಸ್ ನನ್ನ ಹೊಗಳ್ತಾನೇ ಇಲ್ವಲ್ಲಾ ,ನಾನೆಷ್ಟು ಪರಿಶ್ರಮಪಟ್ಟು ಸಾಧನೆಯ ಉನ್ನತ ಹಂತ ತಲುಪಿದ್ರು ನನ್ನವರೆನಿಸಿಕೊಂಡಿದ್ದ ಜನರೇ ನನ್ನನ್ನು ಅಭಿನಂದಿಸುತಿಲ್ಲವಲ್ಲ ,ನಾನು ಮಾಡುವ ಒಳ್ಳೆಯ ಕೆಲಸ ಮತ್ತು ಮನಸ್ಸು ಅದ್ಯಾಕೆ ನನ್ನ ಸಂಗಾತಿಗೆ ಕಾಣುತ್ತಿಲ್ಲ. ಹೀಗೆ ಏನೇನೋ ಅಂದುಕೊಂಡು ಮೇಲಾಗಿ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕುಳಿತುಕೊಂಡು ಬಿಟ್ಟರೆ ಎಲ್ಲವೂ ತಂತಾನೇ ಸರಿಯಾಗಿಬಿಡುತ್ತಾ ನೀವೇ ಹೇಳಿ???? ಇಲ್ಲ ತಾನೇ ಹಾಗಿರುವಾಗ ಆ ನಿರೀಕ್ಷೆಯನ್ನು ನಾವೇ ನಿಯಂತ್ರಿಸಿಕೊಂಡು ಬಿಟ್ಟರೆ ನಮ್ಮ ಅರ್ಧ ಸಮಸ್ಯೆ ಬಗೆಹರಿದಂತೆ ಅಲ್ವಾ.ನಮ್ಮ ಕಡೆಯಿಂದ ಯಾವುದು ಸಾದ್ಯವೋ ಅದರ ಕುರಿತು ಮಾತ್ರ ನಾವು ಚಿಂತನೆ ಮಾಡಬೇಕಲ್ವಾ(ಚಿಂತೆ ಅಲ್ಲ).ನಾವಂದುಕೊಂಡ ಹಾಗೆ ಜೀವನ ನಡೆಯುವುದಿಲ್ಲ ಅನ್ನೋ ಸತ್ಯಸಂಗತಿಯ ಅರಿವು ಮೊದಲು ನಮಗಾಗಬೇಕು.

ಜಗತ್ತಿನಲ್ಲಿ ಇದ್ದಂಗೆ ಯಾವುದೂ ಇರುವುದಿಲ್ಲ. ಇವತ್ತು ಕಣ್ಣಿಗೆ ಹಳದಿಪಟ್ಟಿ ಕಟ್ಟಿಕೊಂಡು ನಮ್ಮನ್ನು ನೋಡುವ,ನಿರ್ಲಕ್ಷಿಸುವ,ಅವಮಾನಿಸುವ ಜನರೇ ಮುಂದೊಂದು ದಿನ ನಮ್ಮ ಒಳ್ಳೆಯತನ ,ಸಹಾಯ ಸಾಧನೆ, ನಿಸ್ವಾರ್ಥ ಶ್ರಮವನ್ನು ಕಂಡು ನಮ್ಮತ್ತ ಸ್ನೇಹಹಸ್ತ ಚಾಚುವ ಸಕಾಲ ಬಂದೇ ಬರುತ್ತದೆ. ನಾವು ಮಾತ್ರ ನಮ್ಮ ಧನಾತ್ಮಕ ಅಲೋಚನೆಗಳಿಂದ ವಿಮುಕ್ತಿಯನ್ನು ಹೊಂದದೆ ನಮ್ಮ ಪಾಲಿನ ನಿರಂತರ ಪ್ರಯತ್ನವನ್ನು ಮುಂದುವರಿಸುತ್ತಲೇ ನಡೆಯೋಣ. ನಮ್ಮಲ್ಲಿ ನಿಜವಾಗಿಯೂ ಪ್ರತಿಭೆ ಇದ್ದದ್ದೆ ಆದರೆ ಅದು ಎಲ್ಲೋ ಒಂದು ಕಡೆ ತನ್ನ ಪರಿಮಳವನ್ನು ಪಸರಿಸುವ ಕೆಲಸವನ್ನು ಅದಾಗಲೇ ಮಾಡಿ ಆಗಿರುತ್ತದೆ. ಪರಿಮಳ ಆಸ್ವಾದಿಸಿದ ಜನ ನಮ್ಮ ಉನ್ನತಿಗೆ ಮನಃಪೂರ್ವಕವಾಗಿ ಹರಸಿ ಹಾರೈಸಿದರೆ ಅಷ್ಟೇ ಸಾಕಲ್ಲವೇ?? ನಾವು ನಿರೀಕ್ಷಿಸದೆ ಸಿಕ್ಕ ಆ ಉತ್ತಮ ಪ್ರತಿಕ್ರಿಯೆಯು ಅದ್ಭುತ ಖುಷಿ ಕೊಡಬಲ್ಲದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

"ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ"ಎಂಬ ಗೀತೆಯ ಸಾರ ಹೇಳುವುದು ಕೂಡ ಇದನ್ನೇ.ಎಷ್ಟೊಂದು ಅರ್ಥಪೂರ್ಣ ಜೀವನ ಸಂದೇಶ ಇದಲ್ಲವೇ?? ನಮ್ಮ ಸುತ್ತ ಕಾಣುವ ಕೆಲವೊಂದಿಷ್ಟು ಜನರ ಸ್ವಭಾವ ಹೇಗಿರುತ್ತದೆ ಎಂದರೆ'"ತಾನು ಕಳ್ಳ ಆದರೆ ಪರರ ನಂಬ". ತಮ್ಮ ಕೈಯಲ್ಲಿ ಏನೂ ಸಾಧಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ.ಬೇರೆಯವರು ಸಾಧಿಸಿದ್ದಕ್ಕೆ ಪ್ರತಿಯಾಗಿ ಸಮಾಧಾನವೂ ಇರುವುದಿಲ್ಲ. ತಾವಾಡುವ ಒಳ್ಳೆ ಮಾತಿನಿಂದ ಮತ್ತೊಬ್ಬರ ಮನಸ್ಸಿಗೆ ಯಾಕೆ ಸಂತೋಷ ಕೊಡಬೇಕು ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ತಾವು ಮತ್ತೊಬ್ಬರನ್ನು ಅಳಿಸಲೆಂದು ಭೂಮಿಗೆ ಬಂದವರೇನೋ ಅನ್ನುವ ರೀತಿಯಲ್ಲಿ ಪ್ರತಿ ಮಾತಿನಿಂದ ಚುಚ್ಚಿ ನೋಯಿಸುತ್ತಾರೆ. ಇಂತಹ ಜನರಿಂದ ಒಳ್ಳೆತನದ ನಿರೀಕ್ಷೆ ಮಾಡುವುದು ಕೋಣನ ಕೈಯಿಂದ ಕಿನ್ನರಿ ನುಡಿಸಿದಂತೆಯೇ ಸರಿ.

ಅದಕ್ಕೆ ಸ್ನೇಹಿತರೆ, ನಮ್ಮ ಬಹುಪಾಲು ನೋವುಗಳಿಗೆ ಕಾರಣಕರ್ತವಾಗಬಲ್ಲ ನಿರೀಕ್ಷೆಯಿಂದ ಆದಷ್ಟು ದೂರ ಇರೋಣ ಎಂದು ಹೇಳಿದ್ದು. ಅದು ಹೇಳುವಷ್ಟು ಸುಲಭವಲ್ಲ ಎಂಬ ಸತ್ಯ ನನಗೂ ಗೊತ್ತಿದೆ. ಆದರೆ ಅಸಾಧ್ಯವೇನು ಅಲ್ಲ ಅಲ್ಲವೇ??. ಸಂತೋಷ, ನಗು ಎಂಬ ಅಮೂಲ್ಯ ರತ್ನಗಳು ನಮ್ಮ ಆಂತರ್ಯದಿಂದ,ಹೃದಯದಿಂದ ಉತ್ಪನ್ನವಾಗುವಂತಹುಗಳೇ ಹೊರತು ಹೊರಗಿನ ಜನರಿಂದ,ವಸ್ತುಗಳಿಂದ ಸಿಗುವಂತಹುದಲ್ಲ. ನಮ್ಮಲ್ಲಿ ಅಡಗಿರುವ ಅಕ್ಷಯ ಸಂಪತ್ತಿನ ಅರಿವನ್ನು ನಾವು ಮಾಡಿಕೊಳ್ಳದೇ ಪರರಿಂದ ಸಿಗುತ್ತದೆಂಬ ಭ್ರಮೆಯ ಸಂತೋಷದ ಭಿಕ್ಷೆಗೆ ಕೈಚಾಚುವ ವ್ಯರ್ಥ ಪ್ರಯತ್ನ ಮಾಡಬೇಕೆ?ನಾನು ಇವತ್ತು ಖುಷಿಯಾಗಿರಬೇಕು ಮತ್ತು ನಗುತ್ತಿರಬೇಕೆಂದು ದೃಢಸಂಕಲ್ಪಿತರಾಗಿ ಮನೆಯಿಂದ ಹೊರಗೆ ಕಾಲಿಟ್ಟಿದ್ದೇ ಆದರೆ ಅದನ್ನು ಸುಳ್ಳಾಗಿಸಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ.ಆದ್ದರಿಂದಲೇ ಇವತ್ತು ,ಈ ಕ್ಷಣವೇ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿರ್ಧಾರ ಮಾಡೋಣ. ನಿರೀಕ್ಷೆಯಿಂದಾಗುವ ನಿರಾಸೆಗಳು ನಮ್ಮ ಸಮೀಪಕ್ಕೆ ಸುಳಿಯದಂತೆ ನಮ್ಮ ಮನ ಹಾಗೂ ಮುಖದ ನಗುವನ್ನು ಅನ್ಯರಲ್ಲಿ ಹುಡುಕುವ ವ್ಯರ್ಥ ಮತ್ತು ಹುಚ್ಚು ಪ್ರಯತ್ನವನ್ನು ಇಂದೇ ಕೈ ಬಿಡೋಣ ಅಲ್ಲವೇ???? ನೀವೇನಂತೀರಿ….???!…

ಲೇಖಕರು: ಶ್ರೀದೇವಿ ಹುಕ್ಕೇರಿ (ಸಿರಿಗಂಧ)ಬೆಳಗಾವಿ

ಲೇಖಕರು ಬರೆದ ಕೊನೆಯ ಲೇಖನ ಆಗಿದ್ದರಿಂದ ಅವರು ಇಂದು ಕೊವಿಡ್ ಮಹಾಮಾರಿಯಿಂದ ಮೃತರಾಗಿದ್ದಾರೆ. ಕನ್ನಡ ಟುಡೆ ನ್ಯೂಸ್ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಮೂಲಕ ಅಕ್ಷರಗಳ ಅಂತಿಮ ನಮನ ಸಲ್ಲಿಸಲಾಗಿದೆ.

Share
WhatsApp
Follow by Email