ಕಲಾವಿದರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಪ್ಪು ಬಟ್ಟೆ ಧರಿಸಿ ರಂಗ ಚಳವಳಿ

ಮೈಸೂರು: ಕಲಾವಿದರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕಲಾವಿದರೆಲ್ಲ ನಿನ್ನೆ ಕಪ್ಪು ಬಟ್ಟೆ ಧರಿಸಿ ರಂಗ ಚಳವಳಿ ಮಾಡಿದ್ದಾರೆ.

ರಾಜ್ಯದ ಯುವ ರಂಗಕಲಾವಿದರಿಗೆ ಸೂಕ್ತ ಆರ್ಥಿಕ ನೆರವು ಮತ್ತು ಅವಕಾಶಗಳನ್ನು ರೂಪಿಸುವ ಕುರಿತು ಯೂತ್ ಆರ್ಟಿಸ್ಟ್ ಗಿಲ್ಡ್ ಕರೆ ಕೊಟ್ಟಿದ್ದ ರಂಗ ಚಳವಳಿಯ ಸಲುವಾಗಿ ಕಲಾವಿದರು ಕಪ್ಪು ಬಟ್ಟೆ ಧರಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಕಲಾವಿದರಿಗೆ 3000 ರೂ. ಘೋಷಿಸಿದೆ. ಆದರೆ ಇದನ್ನು ಪಡೆದುಕೊಳ್ಳಲು ನಿಗದಿ ಪಡಿಸಿರುವ 35 ವರ್ಷದ ಅರ್ಹತೆಯನ್ನು ತೆರವುಗೊಳಿಸಿ 18 ವರ್ಷದ ದಾಟಿದ ಎಲ್ಲ ಕಲಾವಿದರುಗಳಿಗೆ ಆರ್ಥಿಕ ನೆರವು ನೀಡಬೇಕು. ಮುಂದಿನ ಆರು ತಿಂಗಳುಗಳವರೆಗೆ ಅಥವಾ ರಂಗಚಟುವಟಿಕೆ ಯಥಾಸ್ಥಿತಿಗೆ ಮರಳುವವರೆಗೂ ಪ್ರತಿಯೊಬ್ಬ ಕಲಾವಿದನಿಗೂ ಪ್ರತಿ ತಿಂಗಳು ತಲಾ ಕನಿಷ್ಠ 10 ಸಾವಿರ ರೂ. ಸಹಾಯಧನವಾಗಿ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಕಲಾವಿದರನ್ನು ಗುರುತಿಸುವ ಅವರ ವಿವರಗಳನ್ನು ಕಲೆ ಹಾಕುವ ಯಾವುದೇ ಸರಿಯಾದ ಸಮೀಕ್ಷೆಗಳು ಈತನಕ ನಡೆದಿಲ್ಲ ಸರ್ಕಾರ ಅಕಾಡೆಮಿಗಳ ಮೂಲಕ ಅಂತಹ ಯೋಜನೆಗಳನ್ನು ಕೈಗೆತ್ತಿಕೊಂಡು ಇಡೀ ಕರ್ನಾಟಕದಲ್ಲಿರುವ ಕಲಾವಿದರ ಸ್ಪಷ್ಟ ಅಂಕಿ ಅಂಶಗಳು ಸರ್ಕಾರದ ಬಳಿ ಇರುವಂತೆ ನೋಡಿಕೊಳ್ಳಬೇಕು.ಇವು ಮುಂದಿನ ದಿನಗಳಲ್ಲಿ ಅವರಿಗೆ ಸಿಗಬೇಕಾದ ಸವಲತ್ತುಗಳು ಮತ್ತು ಮಾಹಿತಿ ದೊರೆಯುವಂತಾಗಲು ಸಹಾಯವಾಗುತ್ತದೆ. ಎಲ್ಲ ರೀತಿ ಅಕಾಡೆಮಿಗಳಲ್ಲಿ ಆಯಾ ಕ್ಷೇತ್ರದ ಹಿರಿಯರಿದ್ದರು ಸ್ವತಃ ಅವರುಗಳೇ ಆ ಕ್ಷೇತ್ರ ಯುವಕ-ಯುವತಿಯರ ಕುರಿತು ಮಾತನಾಡುತ್ತಿಲ್ಲವಾದ್ದರಿಂದ ಪ್ರತಿ ಅಕಾಡೆಮಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಯುವ ಕಲಾವಿದರಿಗೆ ಪ್ರಾತಿನಿಧ್ಯ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವಕ-ಯುವತಿಯರಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಸಾಂಸ್ಕೃತಿಕವಾಗಿ ಹೆಚ್ಚಿನ ಅವಕಾಶಗಳನ್ನು ಅವರಿಗೆ ನೀಡಬೇಕು. ಆ ಮೂಲಕ ಅವರ ಉದ್ಯೋಗದ ಹಕ್ಕನ್ನು ಅವರಿಗೆ ದೊರೆಯುವಂತೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಯೂತ್ ಆರ್ಟಿಸ್ಟ್ ಗಿಲ್ಡ್ ಚಳವಳಿಗೆ ಮೈಸೂರಿನ ರಂಗಸ್ಮತಿ ಸಾಂಸ್ಕೃತಿಕ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿರುವ ಸಂಘಟನೆಯ ನಿರ್ದೇಶಕ ನವೀನ್ ನೇತಾಜಿ, ಯುವರಂಗ ಪೀಳಿಗೆಯನ್ನು ಕಡೆಗಣಿಸುತ್ತಿರೋ ಸರ್ಕಾರ ಎಚ್ಚೆತ್ತುಕೊಳ್ಳಲಿ. ಆರ್ಥಿಕ ನೆರವು ಪಡೆಯಲು 35 ವರ್ಷ ದಾಟಿರಬೇಕೆಂಬ ಮಿತಿ ಸಡಿಲಗೊಳಿಸಲಿ. ವಯಸ್ಸಿನ ಮಿತಿ ಇಲ್ಲದೇ 18 ವರ್ಷ ಮೇಲ್ಪಟ್ಟ ಎಲ್ಲಾ ಕಲಾವಿದರನ್ನು ಸಮಾನವಾಗಿ ಪರಿಗಣಿಸಿ ಎಂದು ಒತ್ತಾಯಿಸಿದ್ದಾರೆ.

Share