IND vs PAK: 5 ವಿಕೆಟ್‌ಗಳಿಂದ ಭಾರತಕ್ಕೆ ರೋಚಕ ಜಯ!

India vs Pakistan T20 Asia Cup 2022 Highlights: ಏಷ್ಯಾದ ದೈತ್ಯ ತಂಡಗಳಾದ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಈ ವರ್ಷ ಮೊದಲ ಬಾರಿ ಮುಖಾಮುಖಿಯಾದವು. ರಾಜಕೀಯ ಬಿಕ್ಕಟ್ಟಿನ ಕಾರಣ ಕೇವಲ ಐಸಿಸಿ ಮತ್ತು ಎಸಿಸಿ ಆತಿಥ್ಯದ ಟೂರ್ನಿಗಳಲ್ಲಿ ಮಾತ್ರವೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಾ ಬಂದಿವೆ. ಈಗ ಯುಎಇ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ದಾಖಲಿಸಿತು.

ಮುಖ್ಯಾಂಶಗಳು:

  • ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್‌ 2022 ಟೂರ್ನಿ.
  • ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಹೈ-ವೋಲ್ಟೇಜ್ ಪಂದ್ಯ.
  • ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ದಾಖಲಿಸಿದ ಭಾರತ.

ದುಬೈ: ಹಾರ್ದಿಕ್‌ ಪಾಂಡ್ಯ ಅವರ ಆಲ್‌ರೌಂಡ್‌ ಆಟದೊಂದಿಗೆ ಮೇಲುಗೈ ಪಡೆದ ಟೀಮ್ ಇಂಡಿಯಾ, ಜಿದ್ದಾಜಿದ್ದಿನ ಪೈಪೋಟಿ ನೀಡಿದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 5 ವಿಕೆಟ್‌ಗಳ ಜಯ ದಕ್ಕಿಸಿಕೊಳ್ಳುವ ಮೂಲಕ ಏಷ್ಯಾ ಕಪ್ 2022 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗೆಲ್ಲಲು 148 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾ, ಮೊದಲ ಓವರ್‌ನಲ್ಲೇ ಓಪನರ್‌ ಕೆ.ಎಲ್‌ ರಾಹುಲ್‌ (0) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರದೇ ಇದ್ದ ಕಾರಣ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು.

100ನೇ ಟಿ20-ಐ ಪಂದ್ಯದಲ್ಲಿ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದ ವಿರಾಟ್‌ ಕೊಹ್ಲಿ 34 ಎಸೆತಗಳಲ್ಲಿ 35 ರನ್‌ ಮಾತ್ರವೇ ಕೊಡುಗೆ ಕೊಡಲು ಶಕ್ತರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸಿಡಿದೆದ್ದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ (29 ಎಸೆತಗಳಲ್ಲಿ 35 ರನ್) ಮತ್ತು ಹಾರ್ದಿಕ್ ಪಾಂಡ್ಯ (17 ಎಸೆತಗಳಲ್ಲಿ 33* ರನ್‌) ಬಿರುಸಿನ ಬ್ಯಾಟಿಂಗ್‌ ನಡೆಸಿ ತಂಡವನ್ನು ಜಯದ ದಡ ಮುಟ್ಟಿಸಿದರು. 19.4 ಓವರ್‌ಗಲ್ಲಿ 148/5 ರನ್‌ ಗಳಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಬೌಲಿಂಗ್‌ನಲ್ಲೂ 3 ವಿಕೆಟ್‌ ಪಡೆದಿದ್ದ ಹಾರ್ದಿಕ್ ಸಹಜವಾಗಿಯೇ ಪಂದ್ಯಶ್ರೇಷ್ಠ ಗೌರವ ಪಡೆದರು. ಭಾರತ ತಂಡ ‘ಎ’ ಗುಂಪಿನಲ್ಲಿ ತನ್ನ 2ನೇ ಪಂದ್ಯವನ್ನು ಹಾಂಕಾಂಗ್ ಎದುರು ಆಡಲಿದೆ.

ಗಮನ ಸೆಳೆದ ಪಾಕ್ ಬೌಲರ್ಸ್‌ಪದಾರ್ಪಣೆಯ ಪಂದ್ಯವನ್ನಾಡಿದ ಪಾಕ್‌ ತಂಡದ 19 ವರ್ಷದ ಯುವ ವೇಗದ ಬೌಲರ್ ನಸೀಮ್‌ ಶಾ ಭಾರತೀಯ ಬ್ಯಾಟರ್ಸ್‌ನ ನಿದ್ದೆ ಕೆಡಿಸಿದರು. ಮೊದಲ ಓವರ್‌ನಲ್ಲೇ ಕೆ.ಎಲ್‌ ರಾಹುಲ್ ವಿಕೆಟ್‌ ಪಡೆದು, ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ಅಪಾಯಕಾರಿ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ (18) ಅವರನ್ನೂ ಬಲಿಪಡೆದರು. ಕೊನೆಗೆ ಸ್ನಾಯು ಸೆಳೆತದ ನೋವಿನಿಂದ ನರಳುತ್ತಿದ್ದರೂ ತಮ್ಮ 4 ಓವರ್‌ಗಳನ್ನು ಮುಗಿಸಿ 27ಕ್ಕೆ 2 ವಿಕೆಟ್‌ ಸಾಧನೆಯೊಂದಿಗೆ ಗಮನ ಸೆಳೆದರು. ಸ್ಪಿನ್ನರ್‌ ಮೊಹಮ್ಮದ್‌ ನವಾಝ್ (33ಕ್ಕೆ 3) ಮೂರು ವಿಕೆಟ್‌ ಪಡೆದು ಭಾರತೀಯ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆಯಾದರು.ಸಂಕ್ಷಿಪ್ತ ಸ್ಕೋರ್‌ಪಾಕಿಸ್ತಾನ: 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲ್‌ಔಟ್‌ (ಬಾಬರ್‌ ಆಝಮ್ 10, ಮೊಹಮ್ಮದ್‌ ರಿಝ್ವಾನ್ 43, ಇಫ್ತಿಕಾರ್‌ ಅಹ್ಮದ್ 28, ಶಹನವಾಝ್ ದಹಾನಿ 16*; ಭುವನೇಶ್ವರ್ ಕುಮಾರ್ 26ಕ್ಕೆ 4, ಹಾರ್ದಿಕ್ ಪಾಂಡ್ಯ 25ಕ್ಕೆ 2, ಅರ್ಷದೀಪ್ ಸಿಂಗ್ 33ಕ್ಕೆ 2).ಭಾರತ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್‌ (ರೋಹಿತ್‌ ಶರ್ಮಾ 12, ವಿರಾಟ್ ಕೊಹ್ಲಿ 35, ರವೀಂದ್ರ ಜಡೇಜಾ 35, ಸೂರ್ಯಕುಮಾರ್‌ ಯಾದವ್‌ 18, ಹಾರ್ದಿಕ್ ಪಾಂಡ್ಯ 33*; ನಸೀಮ್‌ ಶಾ 27ಕ್ಕೆ 3, ಮೊಹಮ್ಮದ್‌ ನವಾಝ್ 33ಕ್ಕೆ 3). ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ.

147ಕ್ಕೆ ಪಾಕಿಸ್ತಾನ ಆಲ್‌ಔಟ್‌

ಟಾಸ್‌ ಗೆದ್ದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು. ನಾಯಕನ ನಿರ್ಧಾರಕ್ಕೆ ಬೆಲೆ ತಂದ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಆರಂಭದಲ್ಲೇ ವಿಶ್ವದ ನಂ.1 ಟಿ20-ಐ ಬ್ಯಾಟರ್‌ ಹಾಗೂ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಝಮ್‌ (10) ಅವರ ವಿಕೆಟ್‌ ತಂದುಕೊಟ್ಟರು.ಪಿಚ್‌ ವೇಗದ ಬೌಲರ್‌ಗಳಿಗೆ ನೆರವಾಗುತ್ತಿತ್ತು. ಸ್ವಿಂಗ್‌ ಸಿಗದೇ ಇದ್ದರೂ ಲಭ್ಯವಿದ್ದ ಹೆಚ್ಚುವರಿ ಬೌನ್ಸ್‌ನ ಲಾಭ ತೆಗೆದುಕೊಂಡ ಭಾರತೀಯ ಬೌಲರ್ಸ್‌ ನಿರಂತರವಾಗಿ ವಿಕೆಟ್‌ ಕಿತ್ತು ಪಾಕ್ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಪರಿಣಾಮ ಬಾಬರ್‌ ಬಳಗ 19.5 ಓವರ್‌ಗಳಲ್ಲಿ 147 ರನ್‌ಗಳ ಸವಾಲಿನ ಮೊತ್ತಕ್ಕೆ ಆಲ್‌ಔಟ್‌ ಆಯಿತು.

ಅನುಭವದ ಬೌಲಿಂಗ್‌ ದಾಳಿ ಸಂಘಟಿಸಿ 4 ಓವರ್‌ಗಳಲ್ಲಿ 26ಕ್ಕೆ 4 ವಿಕೆಟ್‌ ಪಡೆದ ಭುವನೇಶ್ವರ್‌ ಕುಮಾರ್‌, ಪಾಕಿಸ್ತಾನ ವಿರುದ್ಧ ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ನೀಡಿದ ವೇಗಿ ಎನಿಸಿಕೊಂಡರು. ಅವರಿಗೆ ಉತ್ತಮ ಸಾಥ್ ಕೊಟ್ಟ ಹಾರ್ದಿಕ್ ಪಾಂಡ್ಯ (25ಕ್ಕೆ 3), ಅರ್ಷದೀಪ್ ಸಿಂಗ್ (33ಕ್ಕೆ 3) ಮತ್ತು ಅವೇಶ್ ಖಾನ್ (19ಕ್ಕೆ 1) ಭರ್ಜರಿ ದಾಳಿ ಸಂಘಟಿಸಿದರು. ಪಾಕ್ ಪರ ಮೊಹಮ್ಮದ್ ರಿಝ್ವಾನ್‌ (43) ಗರಿಷ್ಠ ರನ್ ಸ್ಕೋರರ್ ಎನಿಸಿದರು.