ರಾಜ್ಯ ಸುದ್ದಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ

ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು ಈ ವರ್ಷ ಕೂಡ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗೆ ಉತ್ತರ ಬರೆಯಲು ಕಷ್ಟವಾದರೆ ತಮಗೆ ಗೊತ್ತಿರುವ ಯಾವುದಾದರೂ ಎರಡು ಭಾಷೆಯಲ್ಲಿ ಶಬ್ದಗಳನ್ನು ಬರೆಯುವ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ವರ್ಷ ದ್ವಿಭಾಷೆಯಲ್ಲಿ ಉತ್ತರ ಬರೆಯುವ ಸೌಲಭ್ಯವನ್ನು ಪಿಯುಸಿ ಇಲಾಖೆ ಜಾರಿಗೆ ತಂದಿತ್ತು. ಆದರೆ ಅದು ಮೌಲ್ಯಮಾಪನ ಮಾಡುವಾಗ ಕಷ್ಟವಾಗುತ್ತದೆ, ತಮಗೆ ಗೊಂದಲವಾಗುತ್ತದೆ ಎಂದು ಮೌಲ್ಯಮಾಪಕರು ಹೇಳಿದ್ದರು.

ಆದರೆ ದ್ವಿಭಾಷೆಯಲ್ಲಿ ಬರೆಯುವ ಸೌಲಭ್ಯವನ್ನು ಕೇವಲ ಶಬ್ದಗಳಿಗೆ ಮಾತ್ರ ಮೀಸಲಿಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್, ಉತ್ತರ ಪತ್ರಿಕೆಯಲ್ಲಿ ಆಂಗ್ಲ ಭಾಷೆಯನ್ನು ಆಯ್ಕೆ ಮಾಡಿಕೊಂಡರೆ ಕೆಲವು ಶಬ್ದಗಳು ಕಷ್ಟವೆನಿಸಿದರೆ ವಿದ್ಯಾರ್ಥಿಗಳು ಕನ್ನಡದಲ್ಲಿ ಬ್ರ್ಯಾಕೆಟ್ ನಲ್ಲಿ ಬರೆಯಬಹುದು ಎಂದರು. ಈ ವರ್ಷ ರಾಜ್ಯಾದ್ಯಂತ ಒಟ್ಟು  1,013 ಪರೀಕ್ಷಾ ಕೇಂದ್ರಗಳಲ್ಲಿ 6,73,606 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಮುಗಿದ ತಕ್ಷಣ 54 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ 12,100ರಷ್ಟು ಕಡಿಮೆಯಾಗಿದೆ.

About the author

ಕನ್ನಡ ಟುಡೆ

Leave a Comment