ರಾಷ್ಟ್ರ ಸುದ್ದಿ

26/11 ಮುಂಬೈ ದಾಳಿಗೆ 10 ವರ್ಷ: ಸರ್ಜೀಕಲ್ ಸ್ಟೈಕ್’ಗೆ ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ

ಭಿಲ್ವಾರಾ (ರಾಜಸ್ಥಾನ): ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಗಡಿಯಲ್ಲಿ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾಗ ಇಡೀ ದೇಶ ಹೆಮ್ಮೆಪಟ್ಟಿತ್ತು. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಸೀಮಿತ ದಾಳಿಗೆ ದಾಖಲೆಗಳನ್ನು ಕೇಳಿತ್ತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಭಿಲ್ವಾರಾದಲ್ಲಿ ಆಯೋಜಿಸಲಾಗಿರುವ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಗಡಿಯಲ್ಲಿ ಹೋರಾಟಕ್ಕಿಳಿದಾಗ ಯೋಧರು ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಬೇಕೆ?. 26/11 ದಾಳಿ ಹಾಗೂ ದಾಳಿಕೋರರನ್ನು ಕಾಂಗ್ರೆಸ್ ಎಂದಿಗೂ ಮರೆಯುವುದಿಲ್ಲ. ನ್ಯಾಯ ಖಂಡಿತವಾಗಿಯೂ ದೊರೆಯಲಿದೆ. ಈ ಭರವಸೆಯನ್ನು ಇಡೀ ದೇಶಕ್ಕೆ ನಾನು ನೀಡುತ್ತಿದ್ದೇನೆಂದು ಹೇಳಿದ್ದಾರೆ. ನಮ್ಮ ಸರ್ಕಾರ ಉಗ್ರರು ಹಾಗೂ ನಕ್ಸಲರಿಗೆ ನಮ್ಮದೇ ಆದ ಭಾಷೆಯಲ್ಲಿಯೇ ದಿಟ್ಟ ಉತ್ತರವನ್ನು ನೀಡುತ್ತಿದೆ. ನಕ್ಸಲರನ್ನು ಕಾಂಗ್ರೆಸ್ ಕ್ರಾಂತಿಕಾರಿಗಳೆಂದು ಕರೆಯುತ್ತದೆ. ನಂತರ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಕಿಡಿಕಾರಿದ ಅವರು, ಇಂದು 26/11… 10 ವರ್ಷಗಳ ಹಿಂದೆ ರಾಜಧಾನಿ ದೆಹಲಿಯನ್ನು ‘ಮೇಡಂ’ (ಸೋನಿಯಾ ಗಾಂಧಿ) ಆಳುತ್ತಿದ್ದರು. ಇಡೀ ದೇಶದ ಆಡಳಿತವನ್ನು ರಿಮೋಟ್ ಕಂಟ್ರೋಲ್ ಜೊತೆಗೆ ಆಳುತ್ತಿದ್ದರು ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment