ಕ್ರೀಡೆ

7ನೇ ಬಾರಿ ಏಷ್ಯಾ ಕಪ್ ಕಿರೀಟ ತೊಟ್ಟ ಭಾರತ

ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್​ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದಲ್ಲಿ ನಿರ್ಧಾರವಾದ ಪಂದ್ಯ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಭಾರತ ಮತ್ತೊಮ್ಮೆ ಫೈನಲ್​​​ನಲ್ಲಿ ಬಾಂಗ್ಲಾವನ್ನ ಮಣಿಸಿ 7ನೇ ಬಾರಿ ಏಷ್ಯಾಕಪ್ ಕಿರೀಟ ತೊಟ್ಟಿದೆ.

ಟಾಸ್ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾದೇಶಕ್ಕೆ ಲಿಟನ್ ದಾಸ್ ಬಿರುಸಿನ ಆರಂಭ ಒದಗಿಸಿದರು. ಇವರಿಗೆ ಮೆಹಿದಿ ಹಸನ್ ಉತ್ತಮ ಸಾತ್ ನೀಡಿದರು. ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ ಅನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಟೂರ್ನಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾಕ್ಕೆ ಕಠಿಣ ಸ್ಪರ್ಧೆ ಒಡ್ಡಿತು. 7.4 ಓವರ್​​ಗಳಲ್ಲೇ ಬಾಂಗ್ಲಾದ ಮೊತ್ತ 50ರ ಗಡಿ ದಾಟಿತು. ಅತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಲಿಟನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ನಂತರ 17.5 ಓವರ್​​ಗಳಲ್ಲೇ ತಂಡದ ಮೊತ್ತ 100 ತಲುಪಿತ್ತು. ಈ ಹಂತದಲ್ಲಿ ಬೌಲಿಂಗ್ ಬದಲಾವಣೆಯೊಂದಿಗೆ ಬಂದ ಕೇದರ್ ಜಾಧವ್ ಓಪನರ್ ಮೆಹಿದಿ ಹಸನ್ ವಿಕೆಟ್ ಪಡೆಯುವ ಮೂಲಕ ಮೊದಲ ಬ್ರೇಕ್ ನೀಡಿದರು.

ಒಂದು ವಿಕೆಟ್ ಕಳೆದುಕೊಂಡಿದ್ದೇ ತಡ ಬಾಂಗ್ಲಾ ದಿಢೀರ್ ಪತನಕ್ಕೊಳಗಾಯಿತು. ಇದಾದ ಬೆನ್ನಲ್ಲೇ ಇಮ್ರುಲ್ ಕೇಯ್ಸ್ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಬಲೆಗೆಸಿಲುಕಿದರು. ಮತ್ತೊಮ್ಮೆ  ಜಾದೂ ಪ್ರದರ್ಶಿಸಿದ ಜಾಧವ್, ಅಪಾಯಕಾರಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಂಗೂ ಪೆವಿಲಿಯನ್ ಹಾದಿ ತೋರಿಸಿದರು. ಇನ್ಫಾರ್ಮ್ ಬ್ಯಾಟ್ಸ್‌ಮನ್ ಮೊಹಮ್ಮದ್ ಮಿಥುನ್ ಅವರು ರವೀಂದ್ರ ಜಡೇಜಾರ ಅದ್ಭುತ ಫೀಲ್ಡಿಂಗ್​​​ಗೆ ಬಲಿಯಾದರು.  ಇದರೊಂದಿಗೆ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್​​ಗಳಿಸಿದ್ದ ಬಾಂಗ್ಲಾ 139 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಷ್ಟಾದರೂ ವಿಕೆಟ್​​​ನ ಮಗದೊಂದು ತುದಿಯಿಂದ ಭಾರತೀಯ ಬೌಲರ್​ಗಳನ್ನು ಲೀಲಾಜಾಲವಾಗಿ ಎದುರಿಸಿದ ಲಿಟನ್ ದಾಸ್ 87 ಎಸೆತಗಳಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಆದರೆ ನಂತರದಲ್ಲಿ ಮೊಹ್ಮದುಲ್ಲಾ ಕುಲ್ದೀಪ್​ಗೆ ವಿಕೆಟ್ ಒಪ್ಪಿಸಿದರೆ, ಧೋನಿಯ ಮಿಂಚಿನ ಸ್ಟಂಪಿಂಗ್​ಗೆ ಶತಕದಾರಿ ದಾಸ್(121) ಬಲಿಯಾದರು. ನಾಯಕ ಮುಶ್ರಫೆ ಮೊರ್ತಜಾ ಒಂದು ಸಿಕ್ಸ್​​ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಬಾಂಗ್ಲಾ 48.3 ಓವರ್​​ಗಳಲ್ಲಿ 222 ರನ್​​ಗೆ ಆಲೌಟ್ ಆಯಿತು. ಭಾರತ ಪರ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು.

About the author

ಕನ್ನಡ ಟುಡೆ

Leave a Comment