ಸಿನಿ ಸಮಾಚಾರ

ಸಿನಿ ಸಮಾಚಾರ::

ಕನ್ನಡದ ಜನಪ್ರಿಯ ನೃತ್ಯ ಮತ್ತು ಚಿತ್ರ ನಿರ್ದೇಶಕರಾದ ಎ. ಹರ್ಷ ಅವರ ಎರಡು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎ.ಎಸ್ ಮಧು ಪ್ರಸಾದ್ ಅವರೀಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ಮೂಲಕ ಮಧು ಪ್ರಸಾದ್ ಸ್ವತಂತ್ರ ನಿರ್ದೇಶಕರಾಗುವ ಜೊತೆಗೇ ಯುವ ಮುಖಂಡರಾದ ಪ್ರಶಾಂತ್ ಕಲ್ಲೂರ್ ಪೂರ್ಣಪ್ರಮಾಣದ ನಿರ್ಮಾಪಕರಾಗಿ ಹೊರ ಹೊಮ್ಮುತ್ತಿದ್ದಾರೆ.
ಪ್ರಶಾಂತ್ ಕಲ್ಲೂರ್ ಈ ಹಿಂದೆ ಹೊಸಾ ಅಲೆ ಮೂಡಿಸಿದ್ದ ‘ಲಾಸ್ಟ್ ಬಸ್ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು. ಇದೀಗ ಇನ್ನೂ ಹೆಸರಿಡದ ಈ ಚಿತ್ರಕ್ಕವರು ಹಣ ಹೂಡುತ್ತಿದ್ದಾರೆ.
ಈ ಚಿತ್ರಕ್ಕೆ ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಬಹುತೇಕ ಮುಗಿದಿದೆ. ಇನ್ನುಳಿದಂತೆ ತಾರಾಗಣದ ಆಯ್ಕೆಯನ್ನು ಆಡಿಷನ್ ಮೂಲಕ ನಡೆಸಿ ಹೊಸಾ ಪ್ರತಿಭೆಗಳನ್ನು ಆವಿಷ್ಕರಿಸುವ ಕಾರ್ಯಕ್ಕೂ ಮಧುಪ್ರಸಾದ್ ಪ್ರಯತ್ನಿಸುತ್ತಿದ್ದಾರೆ.
ಮೂಲತಃ ಚಾಮರಾಜನಗರದವರಾದ ಮಧು ಪ್ರಸಾದ್ ಈಗ್ಗೆ ಐದು ವರ್ಷಗಳಿಂದೀಚೆಗೆ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆರಂಭದಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು ನಂತರ ಹರ್ಷ ಅವರಿಗೆ ಅಸೋಸಿಯೇಟ್ ಆಗಿ ವಜ್ರಕಾಯ ಮತ್ತು ಜೈ ಮಾರುತಿ ೮೦೦ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಇದೀಗ ಮಧುಪ್ರಸಾದ್ ವಿಭಿನ್ನ ಕಥೆಯೊಂದನ್ನು ಚಿತ್ರವಾಗಿಸಲು ಹೊರಟಿದ್ದಾರೆ. ಹುಮ್ಮಸ್ಸಿನ ಯುವ ಮುಖಂಡ ಪ್ರಶಾಂತ್ ಕಲ್ಲೂರ್ ಎಂಟರ್‌ರ್ಟೈನ್ಮೆಂಟ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆಡಿಷನ್ ಎಲ್ಲ ಮುಗಿದ ನಂತರ ಏಪ್ರಿಲ್’ನಿಂದ  ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

About the author

ಕನ್ನಡ ಟುಡೆ

Leave a Comment